

ರಾಯಚೂರು: ಖಾಸಗಿ ಮಾಲೀಕತ್ವದಲ್ಲಿರುವ ಸ್ಲಂಗಳನ್ನು ಕೊಳೆಗೇರಿ ಪ್ರದೇಶಗಳೆಂದು ಘೋಷಣೆ ಮಾಡದಂತೆ ತಿಳಿಸಿರುವ ಕರ್ನಾಟಕ ಸ್ಲಂ ಬೋರ್ಡ್ ಆಯುಕ್ತ ಬಿ.ವೆಂಕಟೇಶ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ನಗರದ ಟಿಪ್ಪು ಸುಲ್ತಾನ ಉದ್ಯಾನದಲ್ಲಿ ಸ್ಲಂ ನಿವಾಸಿಗಳ ಕ್ರಿಯಾ ವೇದಿಕೆ ಬುಧವಾರ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಧಿಕಾರಿ ಪ್ರಶಾಂತಕುಮಾರಗೆ ಮನವಿ ಸಲ್ಲಿಸಿತು.
ಕರ್ನಾಟಕ ಕೊಳಚೆ ಪ್ರದೇಶಗಳ ಅಧಿನಿಯಮ 1973 ಕಲಂ 3 ಮತ್ತು ಕಲಂ 17ನ್ನು ಆಯುಕ್ತರು ಉಲ್ಲಂಘಿಸಿದ್ದಾರೆ. ಸ್ಲಂ ಕಾಯ್ದೆ ಮತ್ತು ನೀತಿ ಜಾರಿಯಾಗಿದ್ದರೂ ರಾಜ್ಯದಲ್ಲಿ ಸ್ಲಂಗಳ ಸಂಖ್ಯೆ ಹೆಚ್ಚಾಗುತ್ತಿದೆ. ನಗರ ಪ್ರದೇಶದಲ್ಲಿ ಸ್ಲಂ ನಿವಾಸಿಗಳು ಘನತೆಯಿಂದ ಬದುಕಲು ಕಾಯ್ದೆ ಜಾರಿಗೆ ತಂದಿದ್ದು, ರಾಜ್ಯದಲ್ಲಿ 2,708 ಕೊಳೆಗೇರಿ ಪ್ರದೇಶಗಳನ್ನು ಘೋಷಣೆ ಮಾಡಿ ಮೂಲ ಸೌಕರ್ಯ ಅಭಿವೃದ್ಧಿ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗಿದೆ.
709 ಕೊಳೆಗೇರಿ ಪ್ರದೇಶಗಳು ಖಾಸಗಿ ಮಾಲೀಕತ್ವದಲ್ಲಿದ್ದು, ಅವುಗಳನ್ನು ಸ್ವಾಧೀನಪಡಿಸಿಕೊಂಡು ಅಭಿವೃದ್ಧಿಗೆ ಮುಂದಾಗಬೇಕಿದೆ. ಆದರೆ ಖಾಸಗಿ ಮಾಲೀಕತ್ವದಲ್ಲಿನ ಪ್ರದೇಶಗಳನ್ನು ಕೊಳೆಗೇರಿ ಪ್ರದೇಶಗಳು ಎಂದು ಘೋಷಿಸದಂತೆ ಆಯುಕ್ತರು ಹೇಳಿರುವುದು ಖಂಡನೀಯ ಎಂದರು. ಖಾಸಗಿ ಮಾಲೀಕತ್ವದ ಸ್ಲಂಗಳನ್ನು ಕೊಳೆಗೇರಿ ಪ್ರದೇಶಗಳೆಂದು ಘೋಷಿಸಬೇಕು. ಸ್ಲಂ ನಿವಾಸಿಗಳ ಹಕ್ಕು ಉಲ್ಲಂಘನೆ ಮಾಡುತ್ತಿರುವ ಆಯುಕ್ತರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.