

ರಾಯಚೂರು/ಸಿಂಧನೂರು: ಗಾಜಾ ಮೇಲೆ ಇಸ್ರೇಲ್ ಸರ್ಕಾರದಿಂದ ಜನಾಂಗೀಯ ಹತ್ಯೆ, ಯುದ್ಧ, ಅಪರಾಧ ಹಾಗೂ ಪೈಶಾಚಿಕ ದಾಳಿ ಖಂಡಿಸಿ ಎಡಪಕ್ಷಗಳಾದ ಸಿಪಿಐ, ಸಿಪಿಐ(ಎಂ), ಸಿಪಿಐ(ಎಂಎಲ್) ಲಿಬರೇಷನ್, ಎಸ್‌ಯುಸಿಐ(ಸಿ) ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಕಳೆದ 20 ತಿಂಗಳಿಂದ ಇಸ್ರೇಲ್ ನಿರಂತರ ಬಾಂಬ್ ದಾಳಿ ಮತ್ತು ಮಿಲಿಟರಿ ಆಕ್ರಮಣದಿಂದ 55 ಸಾವಿರಕ್ಕೂ ಹೆಚ್ಚು ಪ್ಯಾಲೆಸ್ಟೀನಿಯರು ಹತರಾಗಿದ್ದಾರೆ. ಅವರಲ್ಲಿ ಬಹುಪಾಲು ಮಹಿಳೆಯರು ಮತ್ತು ಮಕ್ಕಳಿದ್ದಾರೆ. ಅಗತ್ಯ ಸೌಕರ್ಯ, ಆಸ್ಪತ್ರೆಗಳು, ಶಾಲೆಗಳು ಮತ್ತು ನಿರಾಶ್ರಿತರ ಆಶ್ರಯಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗುತ್ತಿದೆ. ಪ್ರತಿದಿನವೂ ಗಾಜಾದ ಜನರ ನರಮೇಧ ನಡೆಯುತ್ತಿದೆ. ವಿಶ್ವಸಂಸ್ಥೆ ಮತ್ತು ಅಂತಾರಾಷ್ಟ್ರೀಯ ನ್ಯಾಯಾಲಯ ಸೇರಿದಂತೆ ಜಾಗತಿಕವಾಗಿ ಹೆಚ್ಚುತ್ತಿರುವ ಆಕ್ರೋಶದ ಹೊರತಾಗಿಯೂ, ನೆತನ್ಯಾಹು ಸರ್ಕಾರವು ಅಮೆರಿಕ ಮತ್ತು ಅದರ ಕೆಲವು ಮಿತ್ರರಾಷ್ಟ್ರಗಳ ಬೆಂಬಲದೊಂದಿಗೆ ನಿರ್ಭಯದಿಂದ ತನ್ನ ಕ್ರೂರ ಅಭಿಯಾನವನ್ನು ಮುಂದುವರಿಸಿರುವುದು ಮಾನವೀಯತೆ ಮೇಲಿನ ದೊಡ್ಡ ಹೊಡೆತವಾಗಿದೆ ಎಂದರು.
ಇಸ್ರೇಲ್ ಸರ್ಕಾರ ನಡೆಸಿದ ನರಮೇಧ ಮತ್ತು ಯುದ್ಧ ಅಪರಾಧಗಳನ್ನು ಖಂಡಿಸಿ ರಾಷ್ಟ್ರತ್ವ, ಘನತೆ ಮತ್ತು ಸ್ವಾತಂತ್ರ್ಯಕ್ಕಾಗಿ ಪ್ಯಾಲೆಸ್ಟೀನ್ ಜನರ ನ್ಯಾಯಯುತ ಹೋರಾಟಕ್ಕೆ ಭಾರತ ಸರ್ಕಾರವು ತಾತ್ವಿಕ ನಿಲುವು ತೆಗೆದುಕೊಳ್ಳಬೇಕು. ಇಸ್ರೇಲ್ ದೇಶದೊಂದಿಗಿನ ಎಲ್ಲ ಮಿಲಿಟರಿ ಮತ್ತು ಭದ್ರತಾ ಸಹಕಾರವನ್ನು ತಕ್ಷಣವೇ ನಿಲ್ಲಿಸಬೇಕು. ನರಮೇಧ, ವರ್ಣಭೇದ ನೀತಿ ಮತ್ತು ಆಕ್ರಮಣದ ವಿರುದ್ಧ ಭಾರತದ ಜನರ ಧ್ವನಿಯನ್ನು ಎತ್ತರಿಸಲು ಸರ್ಕಾರ ಮುಂದಾಗಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.