

ರಾಯಚೂರು: ಮುಡಾ ವಿಚಾರದಲ್ಲಿ ಸಿ.ಎಂ.ಸಿದ್ದರಾಮಯ್ಯ ಸಾಚಾ ಏನಲ್ಲ, ಮುಡಾ ನಿವೇಶನ ವಾಪಸ್ ಮಾಡಿ, ಕಾಯ್ದೆ ಹೆಸರುಗಳನ್ನು ಹೇಳಿಕೊಂಡು ತಪ್ಪಿಸಿಕೊಳ್ಳುವುದಲ್ಲ. ರಾಜ್ಯಕ್ಕೆ ಕಾಯ್ದೆಯಡಿ ಆಡಳಿತ ನಡೆಸುವ ಸಿಎಂ ಬೇಡ ನೈತಿಕತೆಯುಳ್ಳ ಸಿಎಂ ಬೇಕಾಗಿದೆ ಎಂದು ಸಿಟಿಜನ್ ಫಾರ್ ಡೆಮೊಕ್ರಸಿ, ಜನಾಂದೋಲನಗಳ ಮಹಾಮೈತ್ರಿಯ ಅಧ್ಯಕ್ಷ ಎಸ್.ಆರ್.ಹಿರೆಮಠ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿ, ಮುಡಾದಲ್ಲಿ ಗಂಭೀರವಾಗಿ ಅಕ್ರಮವಾಗಿದೆ. ರಾಜಕೀಯ ನಾಯಕರು, ಅಧಿಕಾರಿಗಳೂ ಕೂಡ ಈ ಅವ್ಯವಹಾರದಲ್ಲಿದ್ದಾರೆ. ಹಿಂದೆ ಗಣಿ ಹಗರಣದಲ್ಲಿ ಗಾಲಿ ಜನಾರ್ಧನ ರೆಡ್ಡಿ, ಆನಂದ ಸಿಂಗ್ ಸೇರಿದಂತೆ ಅಧಿಕಾರಿಗಳು ಜೈಲಿಗೆ ಹೋಗಿದ್ದರು. ಮುಡಾ ಹಗರಣದ ಕುರಿತು ಸೂಕ್ತ ತನಿಖೆಯಾದಲ್ಲಿ ಅವ್ಯವಹಾರದಲ್ಲಿ ಭಾಗಿಯಾದ ಪ್ರತಿಯೊಬ್ಬರೂ ಕೂಡ ಜೈಲಿಗೆ ಹೋಗುತ್ತಾರೆ ಎಂದರು.
ಸಿಎಂ ಆಗಿದ್ದವರು, ವಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ನಾನು ಎಲ್ಲಿಯೂ ಸಹಿ ಮಾಡಿಲ್ಲ ಎಂದು ಹೇಳುವುದು ಷ್ಟರ ಮಟ್ಟಿಗೆ ಸರಿ ಎಂಬುವುದನ್ನು ಅವರು ಅರ್ಥಮಾಡಿಕೊಳ್ಳಬೇಕು. ವಿರೋಧ ಪಕ್ಷದ ನಾಯಕರಲ್ಲೂ ಕೂಡ ಭೂಕಬಳಿಕೆಯ ಕುಳಗಳಿದ್ದಾರೆ. ಅವರ ಅವಧಿಯಲ್ಲಿ ಆದಷ್ಟು ಹೊಲಸು ಆಡಳಿತ ಹಿಂದೆಂದೂ ಆಗಿಲ್ಲ. ಬಿಜೆಪಿಯವರಿಗೆ ಸಿಎಂ ಅವರ ರಾಜಿನಾಮೆ ಕೇಳುವ ನೈತಿಕತೆಯಿಲ್ಲ. ಬಿಜೆಪಿ ಹಾಗೂ ಆರ್‌ಎಸ್ಸೆಸ್ ದೇಶದಿಂದ ಹೋದರೆ ಒಳಿತಾಗಲಿದೆ ಎಂದು ತಿಳಿಸಿದರು.
ವಕ್ಫ್ ವಿಚಾರವಾಗಿ ಮಾತನಾಡಿದ ಅವರು, ತಮ್ಮ ಪಹಣಿಯಲ್ಲಿ ವಕ್ಫ್ ಹೆಸರು ಬಂದಾಗ ಮಾಲಿಕರು ಜಾಗೃತರಾಗಬೇಕು. ವಕ್ಫ್ ಇರಲಿ, ಯಾವುದೇ ಧರ್ಮವಿರಲಿ ದೇಶದ ಕಾನೂನು ಎಲ್ಲರಿಗೂ ಸರಿಸಮವಾದದ್ದು, ರೈತರಿಗೆ ಅನ್ಯಾಯವಾಗಬಾರದು ಎಂದರು.