

ರಾಯಚೂರು: ಸ್ಕೂಟಿಗೆ ಹಿಂಬಂದಿಯಿಂದ ಕಾರ್ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿಯಲ್ಲಿ ಚಲಿಸುತ್ತಿದ್ದ ಇಬ್ಬರು ಯುವತಿಯರ ಪೈಕಿ ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಇನ್ನೊಬ್ಬ ಯುವತಿ ಸಾವನಪ್ಪಿದ ಘಟನೆ ರಾಯಚೂರು ನಗರದ ಲಿಂಗಸುಗೂರು ರಸ್ತೆಯ ಕೃಷಿ ವಿವಿ ಎದುರು ಶನಿವಾರ ರಾತ್ರಿ ಜರುಗಿದೆ.
ಸಾಕ್ಷಿ(18) ಸ್ಥಳದಲ್ಲಿಯೇ ಮೃತಪಟ್ಟಿದ್ದು, ಸಾಕ್ಷಿಯ ಸಹೋದರಿ ಸಂಜನಾ(23) ಎಂಬ ಯುವತಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಬ್ಬರು ಸಹೋದರಿಯರು ಸ್ಕೂಟಿ ಮೇಲೆ ಹೋಗುತ್ತಿದ್ದಾಗ ಹಿಂಬದಿಯಿಂದ ಬಂದ ಕಾರ್ ಸ್ಕೂಟಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆತಕ್ಕೆ ಇಬ್ಬರು ಯುವತಿಯರು ಕಾರ್ ಹಿಂಬದಿಯ ಡಿಕ್ಕಿ ಮೇಲೆ ಬಿದ್ದಿದ್ದಾರೆ. ಸಾಕ್ಷಿ ಎಂಬ ಯುವತಿ ಸ್ಥಳದಲ್ಲಿಯೇ ಸಾವನಪ್ಪಿದ್ದಾಳೆ.
ಕಾರ್ ಚಾಲಕ ಪರಾರಿಯಾಗಿದ್ದು, ಸ್ಥಳಕ್ಕೆ ಸಂಚಾರಿ ಪೊಲೀಸರು ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.