ಶೇ.88 ಮಕ್ಕಳಿಗೆ ಮೊಟ್ಟೆ ಬೇಕು!

School Eggs Distribute
Published on

ರಾಯಚೂರು: ಅಪೌಷ್ಟಿಕತೆ ನಿವಾರಣೆ ನಿಟ್ಟಿನಲ್ಲಿ ಪ್ರಾಥಮಿಕ ಶಾಲಾ ಮಕ್ಕಳಿಗೆ ವಾರದಲ್ಲಿ ಮೂರು ದಿನ ಮೊಟ್ಟೆ ನೀಡುತ್ತಿರುವ ಕುರಿತು ಪರ ವಿರೋಧ ಚರ್ಚೆಯ ನಡುವೆ ಜಿಲ್ಲೆಯ ಸರ್ಕಾರಿ ಶಾಲಾವಾರು ನಡೆಸಿದ ಸಮೀಕ್ಷೆಯಲ್ಲಿ ಶೇ.88 ವಿದ್ಯಾರ್ಥಿಗಳು ಮೊಟ್ಟೆ ಬೇಕು ಎನ್ನುವ ಬೇಡಿಕೆಯಿಟ್ಟಿರುವುದು ಬೆಳಕಿಗೆ ಬಂದಿದೆ.

ಕಲ್ಯಾಣ ಕರ್ನಾಟಕ ಜಿಲ್ಲೆಗಳು ಹಾಗೂ ವಿಜಯಪುರ ಜಿಲ್ಲೆಯಲ್ಲಿ 1 ರಿಂದ 8ನೇ ತರಗತಿ ಮಕ್ಕಳಿಗೆ ಬಿಸಿಯೂಟದ ಜತೆಗೆ ವಾರದಲ್ಲಿ ಮೂರು ದಿನ ಮೊಟ್ಟೆ ಮತ್ತು ಬಾಳೆಹಣ್ಣು ವಿತರಿಸಲಾಗುತ್ತಿದೆ. ಮೊಟ್ಟೆ ತಿನ್ನಲು ನಿರಾಕರಿಸುವ ಮಕ್ಕಳಿಗೆ ಬಾಳೆಹಣ್ಣು ನೀಡಲಾಗುತ್ತಿದೆ. ಮಕ್ಕಳಲ್ಲಿ ಅಪೌಷ್ಟಿಕತೆ ಹೆಚ್ಚಾಗಿರುವ ಜಿಲ್ಲೆಗಳಲ್ಲಿ ಪ್ರಸ್ತುತ ಮೊಟ್ಟೆ ವಿತರಿಸಲಾಗುತ್ತಿದ್ದು, ಮಕ್ಕಳಿಗೆ ಮೊಟ್ಟೆ ವಿತರಿಸುವುದಕ್ಕೆ ಹಲವು ಮಠಾಧೀಶರು ವಿರೋಧ ವ್ಯಕ್ತಪಡಿಸಿದ್ದಾರೆ. ಹಲವು ಸಂಘಟನೆಗಳು ಯಾವುದೇ ಕಾರಣಕ್ಕೂ ಮೊಟ್ಟೆ ವಿತರಣೆ ನಿಲ್ಲಿಸಬಾರದು ಎನ್ನುವ ಪಟ್ಟು ಹಿಡಿದಿರುವುದರಿಂದ ಶಾಲಾವಾರು ಸಮೀಕ್ಷೆ ನಡೆಸಲಾಗಿದೆ.

ಶಾಲೆಗಳಲ್ಲಿ ಮಕ್ಕಳಿಂದ ಅಭಿಪ್ರಾಯ ಪಡೆದು ಎಷ್ಟು ಮಕ್ಕಳು ಮೊಟ್ಟೆ ತಿನ್ನಲು ಒಪ್ಪಿಗೆ ನೀಡಿದ್ದಾರೆ. ನಮಗೆ ಮೊಟ್ಟೆ ಬೇಡ ಬಾಳೆಹಣ್ಣು ನೀಡಿ ಎನ್ನುವ ಮಕ್ಕಳನ್ನು ಗುರುತಿಸಲಾಗಿದೆ. ಸಮೀಕ್ಷೆಯಲ್ಲಿ ಬಹುತೇಕ ಮಕ್ಕಳು ನಮಗೆ ಮೊಟ್ಟೆ ಬೇಕು ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯ 1,701 ಸರ್ಕಾರಿ ಕಿರಿಯ, ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ 2.16 ಲಕ್ಷ ಮಕ್ಕಳು ಅಭ್ಯಾಸ ಮಾಡುತ್ತಿದ್ದಾರೆ. ಅದರಲ್ಲಿ 1,90,748 ಮಕ್ಕಳು ಮೊಟ್ಟೆ ಬೇಕು ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದು, 26,161 ಮಕ್ಕಳು ಮೊಟ್ಟೆ ಬೇಡ ಬಾಳೆಹಣ್ಣು ನೀಡಿ ಎನ್ನುವ ಮಾತನಾಡಿದ್ದಾರೆ.

ಜಿಲ್ಲೆಯಲ್ಲಿ ಮಾನ್ವಿ ತಾಲೂಕಿನಲ್ಲಿ ಶೇ.90ರಷ್ಟು ಮಕ್ಕಳು ಮೊಟ್ಟೆ ಬೇಕು ಎಂದು ಹೇಳಿದ್ದರೆ, ದೇವದುರ್ಗ ತಾಲೂಕಿನಲ್ಲಿ ಶೇ.88ರಷ್ಟು, ಲಿಂಗಸುಗೂರು ತಾಲೂಕಿನಲ್ಲಿ ಶೇ.86ರಷ್ಟು, ಸಿಂಧನೂರು ತಾಲೂಕಿನಲ್ಲಿ ಶೇ.87ರಷ್ಟು, ರಾಯಚೂರು ತಾಲೂಕಿನಲ್ಲಿ ಶೇ.89ರಷ್ಟು ಮಕ್ಕಳು ಬೇಕು ಎಂದಿದ್ದಾರೆ.

ಸಮೀಕ್ಷೆ ಹೇಗೆ?
ಶಾಲಾ ಮುಖ್ಯಶಿಕ್ಷಕರಿಂದ ಆಯಾ ಶಾಲೆಗಳಲ್ಲಿ ಮೊಟ್ಟೆ ಬೇಕು, ಬೇಡ ಎನ್ನುವ ವಿದ್ಯಾರ್ಥಿಗಳ ಸಂಖ್ಯೆಯನ್ನು ಬಿಆರ್‌ಸಿಗಳ ಮೂಲಕ ಪಡೆಯಲಾಗಿದೆ. ಜಿಲ್ಲೆಯಲ್ಲಿ ಎಷ್ಟು ಮಕ್ಕಳು ಮೊಟ್ಟೆ ಬೇಕು ಎಂದಿದ್ದಾರೆ ಎನ್ನುವ ಅಂಕಿ-ಸಂಖ್ಯೆಯನ್ನು ತಯಾರಿಸಲಾಗಿದೆ. ಮೊಟ್ಟೆಗಳನ್ನು ನೇರವಾಗಿ ಶಾಲೆಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿದ್ದು, ಮೊಟ್ಟೆ ತಿನ್ನುವ ಮಕ್ಕಳ ಸಂಖ್ಯೆ ಕಡಿಮೆಯಿರುವ ಶಾಲೆಗಳಿಗೆ ಆಯಾ ಗ್ರಾಪಂ ಕೇಂದ್ರದಿಂದ ಮೊಟ್ಟೆಗಳನ್ನು ಶಾಲೆಗಳಿಗೆ ತೆಗೆದುಕೊಂಡು ಹೋಗುವಂತೆ ತಿಳಿಸಲಾಗಿದೆ. ಒಂದು ವಾರಕ್ಕಿಂತ ಹೆಚ್ಚಿನ ದಿನಗಳ ಕಾಲ ಮೊಟ್ಟೆ ಶೇಖರಣೆ ಮಾಡದಿರುವಂತೆ ಎಲ್ಲ ಮುಖ್ಯಶಿಕ್ಷಕರಿಗೆ ಸೂಚನೆ ನೀಡಲಾಗಿದೆ.

ಬಿಆರ್‌ಸಿಗಳ ಮೂಲಕ ಶಾಲಾವಾರು ಮಕ್ಕಳಿಂದ ಅಭಿಪ್ರಾಯ ಪಡೆಯಲಾಗಿದೆ. ಮೊಟ್ಟೆ ಬೇಕು ಎನ್ನುವ ಮತ್ತು ಮೊಟ್ಟೆ ಬೇಡ ಬಾಳೆಹಣ್ಣು ಬೇಕು ಎನ್ನುವ ವಿದ್ಯಾರ್ಥಿಗಳ ಸಂಖ್ಯೆಯನ್ನು ಕ್ರೋಡೀಕರಿಸಲಾಗಿದೆ. ಶಾಲೆಗಳಿಗೆ ನೇರವಾಗಿ ಮೊಟ್ಟೆ ತಲುಪಿಸುವ ವ್ಯವಸ್ಥೆಯನ್ನೂ ಮಾಡಲಾಗಿದೆ.| ಡಾ.ಈರಣ್ಣ ಕೊಸಗಿ, ಶಿಕ್ಷಣಾಧಿಕಾರಿ, ಅಕ್ಷರ ದಾಸೋಹ ವಿಭಾಗ, ರಾಯಚೂರುಶೇ.88 ಮಕ್ಕಳಿಗೆ ಮೊಟ್ಟೆ ಬೇಕು!

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net