

ರಾಯಚೂರು: ಜಿಲ್ಲೆಯ ವಿವಿಧ ತಾಲೂಕುಗಳ ಗ್ರಾಮಾಂತರ ಭಾಗದಲ್ಲಿ ವಿದ್ಯಾರ್ಥಿಗಳಿಗೆ ಸರಿಯಾದ ಬಸ್ ವ್ಯವಸ್ಥೆ ಇಲ್ಲದ ಕಾರಣ ಶಾಲಾ ಕಾಲೇಜುಗಳಿಗೆ ತೆರಳಲು ಕಷ್ಟವಾಗುತ್ತಿದ್ದು, ಕೂಡಲೇ ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ಭೀಮ್ ಆರ್ಮಿ ಸಂಘಟನೆಯಿಂದ ನಗರದ ಡಿಸಿ ಕಚೇರಿ ಆವರಣದಲ್ಲಿ ಕಚೇರಿಯ ಸ್ಥಾನಿಕ ಅಧಿಕಾರಿ ಪರಶುರಾಮ್‌ಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.
ಜಿಲ್ಲೆಯಲ್ಲಿ ಅ.27ರಂದು ಗ್ರಾಮ ಲೆಕ್ಕಾಧಿಕಾರಿಗಳ ಹುದ್ದೆಗೆ ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯಲಿವೆ. ರಾಯಚೂರು ಹಾಗೂ ಸಿಂಧನೂರು ನಗರದಲ್ಲಿ ಪರೀಕ್ಷಾ ಕೇಂದ್ರಗಳನ್ನು ಮಾಡಲಾಗಿದ್ದು, ಜಿಲ್ಲೆಯ ಗ್ರಾಮೀಣ ಪ್ರದೇಶಗಳಿಂದ ಅಭ್ಯರ್ಥಿಗಳು ಪರೀಕ್ಷೆಗೆ ತೆರಳು ಬಸ್ ವ್ಯವಸ್ಥೆ ಇಲ್ಲದಂತಾಗಿದೆ. ಇದಲ್ಲದೇ ಇದೀಗ ಶಾಲೆಗಳು ಆರಂಭವಾಗಿದ್ದು, ಶಾಲಾ ವಿದ್ಯಾರ್ಥಿಗಳಿಗೂ ಅಸಮರ್ಪಕ ಬಸ್ ವ್ಯವಸ್ಥೆಯಿಂದ ಅನಾನುಕೂಲ ಉಂಟಾಗುತ್ತಿದೆ.
ಕೂಡಲೇ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಜಿಲ್ಲೆಯ ಎಲ್ಲ ಗ್ರಾಮೀಣ ಭಾಗಗಳಿಗೆ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಪ್ರವೀಣಕುಮಾರ, ಉಪಾಧ್ಯಕ್ಷ ಸಿ.ದೀಪಕ್ ಭಂಡಾರಿ, ಸದಸ್ಯ ರೂನಾಲ್ಡ್ ಯಡ್ವರ್ಡ್ ಸೇರಿದಂತೆ ಇತರರಿದ್ದರು.