ರಾಯಚೂರು ಗ್ರಾಮೀಣದಲ್ಲಿ ಗೆಲುವಿನ ಅಂತರ ಹೆಚ್ಚಿಸಿಕೊಂಡ ಬಸನಗೌಡ ದದ್ದಲ್

Raichur Rural Basanagouda Daddal Congress Vicrtory
ರಾಯಚೂರು ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ದದ್ದಲ್ ರಾಯಚೂರಿನ ಎಸ್‌ಆರ್‌ಪಿಎಸ್ ಪಿಯು ಕಾಲೇಜಿನ ಮತ ಎಣಿಕೆ ಕೇಂದ್ರದಲ್ಲಿ ಶನಿವಾರ ಕಾರ್ಯಕರ್ತರೊಂದಿಗೆ ವಿಜಯದ ಸಂಕೇತ ಪ್ರದರ್ಶಿಸಿದರು.
Published on

ರಾಯಚೂರು: ಪಕ್ಷದಲ್ಲಿನ ಕೆಲವು ಮುಖಂಡರು ಸೋಲಿಸಲು ಒಳಸಂಚು ನಡೆಸಿದರೂ ಅದನ್ನು ಮೀರಿ ಮರು ಆಯ್ಕೆಯಾಗುವಲ್ಲಿ ರಾಯಚೂರು ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ದದ್ದಲ್ ಯಶಸ್ವಿಯಾಗಿದ್ದಾರೆ.

ಕಳೆದ ಚುನಾವಣೆಗೆ ಹೋಲಿಸಿದಲ್ಲಿ ಈ ಬಾರಿ ಬಿಜೆಪಿ ಅಭ್ಯರ್ಥಿ ತಿಪ್ಪರಾಜು ಹವಾಲ್ದಾರ್ ತೀವ್ರ ಸ್ಪರ್ಧೆ ನೀಡಿದ್ದರೂ ಕಳೆದ ಬಾರಿ 9,963 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದ ಬಸನಗೌಡ ದದ್ದಲ್ ಈ ಬಾರಿ 13,857 ಮತಗಳ ಅಂತರದಿಂದ ಗೆದ್ದಿದ್ದಾರೆ.

ಕಾಂಗ್ರೆಸ್‌ನಲ್ಲಿನ ಬಣ ರಾಜಕೀಯದಿಂದಾಗಿ ಪಕ್ಷದಲ್ಲಿನ ಪ್ರಭಾವಿಗಳು ಟಿಕೆಟ್ ತಪ್ಪಿಸಲು ಪ್ರಯತ್ನಿಸಿದರೂ ಟಿಕೆಟ್ ತರುವಲ್ಲಿ ಯಶಸ್ವಿಯಾಗಿದ್ದ ದದ್ದಲ್‌ಗೆ ಪಕ್ಷದವರ ಒಳಸಂಚು ಮೀರಿ ಗೆಲುವಿಗಾಗಿ ತಮ್ಮದೇ ಆದ ರೀತಿಯಲ್ಲಿ ಯೋಜನೆ ಹಾಕಿಕೊಂಡು ಮುನ್ನಡೆದಿದ್ದರು.

ಈ ಹಿಂದೆ ಶಾಸಕನಾಗಿದ್ದಾಗ ಮಾಡಿದ್ದ ತಪ್ಪುಗಳನ್ನು ಮುಂದಿನ ದಿನಗಳಲ್ಲಿ ಮಾಡುವುದಿಲ್ಲ ಎನ್ನುವ ಮೂಲಕ ಜನರ ಅನುಕಂಪ ಗಿಟ್ಟಿಸಲು ಬಿಜೆಪಿ ಅಭ್ಯರ್ಥಿ ತಿಪ್ಪರಾಜು ನಡೆಸಿದ ಪ್ರಯತ್ನ ಯಶಸ್ವಿಯಾಗಿಲ್ಲ. ಅಧಿಕಾರಾವಧಿಯಲ್ಲಿ ದದ್ದಲ್ ಜನರಿಗೆ ನೀಡಿದ ಸ್ಪಂದನೆಯೇ ಜನರು ಮತ್ತೊಮ್ಮೆ ಕೈ ಹಿಡಿಯುವಂತಾಗಿದೆ.

ಬಿಜೆಪಿ ಟಿಕೆಟ್ ಕೈತಪ್ಪಿದ್ದರಿಂದ ಜೆಡಿಎಸ್‌ನಿಂದ ಕಣಕ್ಕಿಳಿದಿದ್ದ ಕೆ.ನರಸಿಂಹ ನಾಯಕ ಆರಂಭದಲ್ಲಿ ಅಬ್ಬರದ ಪ್ರಚಾರ ನಡೆಸಿದರೂ ಮತದಾನದ ಹೊಸ್ತಿಲಲ್ಲಿ ತಟಸ್ಥರಾಗಿರುವಂತೆ ಕಂಡು ಬಂತು. ಇದು ಬಿಜೆಪಿ ಗೆಲುವಿಗೆ ಅನುಕೂಲವಾಗಲಿದೆ ಎಂದು ಅಂದಾಜಿಸಲಾದರೂ ಅದರ ಪ್ರಭಾವ ದದ್ದಲ್ ಮೇಲೆ ಬೀರಲಿಲ್ಲ.

ಕಾರ್ಯಕರ್ತರ ಬೆಂಬಲ, ಮುಖಂಡರ ನಿರಂತರ ಪ್ರಯತ್ನ ಬಸನಗೌಡ ದದ್ದಲ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ಬಿಜೆಪಿಯ ಕೆಲವು ಮುಖಂಡರು ಕಾಂಗ್ರೆಸ್ ಸೇರ್ಪಡೆಗೊಂಡಿರುವುದು ಕೂಡಾ ಸಾಕಷ್ಟು ಸಹಕಾರಿಯಾಗಿದೆ ಎಂದು ಹೇಳಬಹುದಾಗಿದೆ.

ಆಮ್ ಆದ್ಮಿ ಪಕ್ಷದ ಸುಭಾಷ್‌ಚಂದ್ರ ಸಂಭಾಜಿ 1,531 ಮತ್ತು ಕೆಆರ್‌ಪಿಪಿಯ ಖಾಸಿಂ ನಾಯಕ 427 ಮತಗಳನ್ನು ಪಡೆಯುವ ಮೂಲಕ ತೀವ್ರ ಹಿನ್ನಡೆ ಅನುಭವಿಸಿದರೆ, ಜೆಡಿಎಸ್‌ನ ಕೆ.ನರಸಿಂಹ ನಾಯಕ 4,090 ಮಾತ್ರ ಪಡೆದು ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳುವಂತಾಗಿದೆ.

ಈ ಬಾರಿ ಹೆಚ್ಚಿನ ನಿರೀಕ್ಷೆ

ಕಳೆದ ಅವಧಿಯಲ್ಲಿ ವಿಪಕ್ಷ ಶಾಸಕರಾಗಿ ಹೆಚ್ಚಿನ ಅನುದಾನ ತಂದಿರುವೆ ಎಂದು ಹೇಳುತ್ತಿದ್ದ ಬಸನಗೌಡ ದದ್ದಲ್‌ಗೆ ರಾಜ್ಯದಲ್ಲಿ ಈ ಬಾರಿ ತಮ್ಮದೇ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿರುವುದರಿಂದ ಕ್ಷೇತ್ರದ ಜನರ ನಿರೀಕ್ಷೆ ಹೆಚ್ಚಾಗಿದೆ. ಪ್ರಮುಖವಾಗಿ ನೀರಾವರಿ ವಂಚಿತ ಹಳ್ಳಿಗಳಿಗೆ ನೀರು ಹರಿಸುವುದು ಸೇರಿ ಹಲವಾರು ಸಮಸ್ಯೆಗಳನ್ನು ನಿವಾರಿಸಬೇಕಾದ ಹೊಣೆಗಾರಿಕೆ ಇದೆ.

ಜಿಲ್ಲೆಯಲ್ಲಿ ಗೆಲುವು ಸಾಧಿಸಿರುವ ಕಾಂಗ್ರೆಸ್‌ನ ನಾಲ್ವರು ಅಭ್ಯರ್ಥಿಗಳಲ್ಲಿ ದದ್ದಲ್ ಕಿರಿಯ ಎನ್ನಲಾದರೂ ಪರಿಶಿಷ್ಟ ಪಂಗಡಕ್ಕೆ ಸಚಿವ ಸ್ಥಾನ ನೀಡಬೇಕು ಎನ್ನುವ ವಿಷಯ ಬಂದಾಗ ಪಕ್ಷದ ವರಿಷ್ಠರು ಬಸನಗೌಡ ದದ್ದಲ್‌ಗೆ ಆದ್ಯತೆ ನೀಡುವ ಸಾಧ್ಯತೆಗಳು ಹೆಚ್ಚಾಗಿವೆ.

ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ನಡೆಸುವುದರ ಜತೆಗೆ ಜನರ ಆಶಯಗಳನ್ನು ಈಡೇರಿಸಲು ಪ್ರಯತ್ನಿಸುವೆ. ನೀರಾವರಿ ಸಮಸ್ಯೆ ನಿವಾರಣೆ, ಚಿಕ್ಕಮಂಚಾಲಿ ಬ್ರಿಡ್ಜ್ ಕಂ ಬ್ಯಾರೇಜ್ ಮತ್ತು ಕೆರೆ ತುಂಬಿಸುವ ಯೋಜನೆಗಳನ್ನು ಕಾರ್ಯಗತಗೊಳಿಸಲು ಆದ್ಯತೆ ನೀಡಲಾಗುವುದು. | ಬಸನಗೌಡ ದದ್ದಲ್, ಶಾಸಕ, ರಾಯಚೂರು ಗ್ರಾಮೀಣ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net