

ರಾಯಚೂರು: ಗ್ರಾಮೀಣ ಪ್ರದೇಶದಲ್ಲಿ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮಗಳ ಕುರಿತು ವ್ಯಾಪಕ ಜಾಗೃತಿ ನಡೆಸುವ ಮೂಲಕ ಕರೊನಾ ನಿಯಂತ್ರಣಕ್ಕೆ ಅಗತ್ಯಕ್ರಮಗಳನ್ನು ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಸೂಚಿಸಿದರು.
ಸ್ಥಳೀಯ ಜಿಪಂ ಸಭಾಂಗಣದಲ್ಲಿ ಕೋವಿಡ್ ನಿಯಂತ್ರಣ ಕುರಿತಂತೆ ಗುರುವಾರ ಸಂಜೆ ಜರುಗಿದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಗ್ರಾಮೀಣ ಭಾಗದ ಜನರಲ್ಲಿ ಕೋವಿಡ್ ಲಸಿಕೆ ಬಗ್ಗೆ ಇರುವ ಆತಂಕವನ್ನು ದೂರ ಮಾಡಿ ಲಸಿಕೆ ಪಡೆಯುವಂತೆ ಮನವೊಲಿಸಬೇಕು ಎಂದರು.
ಗ್ರಾಮ ಮಟ್ಟದ ಟಾಸ್ಕ್‌ಫೋರ್ಸ್ ಸಮಿತಿ ಸದಸ್ಯರು ಹಾಗೂ ಆರೋಗ್ಯ ಕಾರ್ಯಕರ್ತರು ಪ್ರತಿದಿನ ಗ್ರಾಮೀಣ ಭಾಗದಲ್ಲಿ 100 ಜನರಿಗೆ ಲಸಿಕೆ ಹಾಕುವ ಗುರಿ ಇಟ್ಟುಕೊಳ್ಳಬೇಕು. ವಿಶೇಷವಾಗಿ 45 ವರ್ಷ ಮೇಲ್ಪಟ್ಟ ಹಾಗೂ ಹಿರಿಯ ನಾಗರಿಕರಿಗೆ ಲಸಿಕೆ ಹಾಕಿಸಬೇಕೆಂದು ಸಲಹೆ ನೀಡಿದರು.
ರಾಯಚೂರು ನಗರ ಶಾಸಕ ಡಾ.ಶಿವರಾಜ ಪಾಟೀಲ್ ಮಾತನಾಡಿ, ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಮತ್ತು ಪರಸ್ಪರ ಅಂತರ ಕಾಪಾಡುವ ಕುರಿತು ಗ್ರಾಮಾಂತರ ಭಾಗದಲ್ಲಿ ಹೆಚ್ಚು ತಿಳಿವಳಿಕೆ ನೀಡಬೇಕಾದ ಅಗತ್ಯವಿದೆ. ಮುನ್ನೆಚ್ಚರಿಕೆ ಕ್ರಮ ಪಾಲಿಸದಿರುವವರ ವಿರುದ್ಧ ದಂಡ ವಿಧಿಸುವ ಕೆಲಸ ಮಾಡಬೇಕೆಂದು ತಿಳಿಸಿದರು.
ಸಭೆಯಲ್ಲಿ ತಹಸೀಲ್ದಾರ್ ಡಾ.ಹಂಪಣ್ಣ ಸಜ್ಜನ್, ತಾಪಂ ಇಒ ರಾಮರೆಡ್ಡಿ ಪಾಟೀಲ್ ಹಾಗೂ ವಿವಿಧ ಇಲಾಖೆ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.