

ರಾಯಚೂರು: ಲಾಕ್‌ಡೌನ್ ಹಿನ್ನೆಲೆಯಲ್ಲಿ ಸ್ಥಳೀಯ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಸ್ಥಗಿತಗೊಳಿಸಿದ್ದ ವಿವಿಧ ಸೇವೆಗಳಲ್ಲಿ ಕೆಲವು ಸೇವೆಗಳನ್ನು ಸೋಮವಾರದಿಂದ ಆರಂಭಿಸಲಾಗಿದ್ದು, ಜನರು ಹೆಚ್ಚಿನ ಸಂಖ್ಯೆಯಲ್ಲಿ ಕಚೇರಿಗೆ ಆಗಮಿಸುತ್ತಿದ್ದಾರೆ.
ಬಿಎಸ್ 6 ಮಾದರಿಯ ವಾಹನಗಳ ನೋಂದಣಿ ಕಾರ್ಯವನ್ನು ಕೆಲ ದಿನಗಳ ಹಿಂದೆಯೇ ಆರಂಭಿಸಲಾಗಿದ್ದು, ಸೋಮವಾರದಿಂದ ಎಲ್‌ಎಲ್‌ಆರ್ ಮತ್ತು ಡಿಎಲ್ ನೀಡುವ ಕಾರ್ಯ ಆರಂಭಿಸಲಾಗಿದೆ. ದೈಹಿಕ ಅಂತರ ಕಾಪಾಡುವಂತೆ ಜನರಿಗೆ ಮನವಿ ಮಾಡಲಾಗುತ್ತಿದೆ.
ಎಲ್‌ಎಲ್‌ಆರ್ ಮತ್ತು ಡಿಎಲ್‌ಗಾಗಿ ಈ ಹಿಂದೆ ಸ್ಲಾಟ್ ಪ್ರಕಾರ ಶುಲ್ಕ ಕಟ್ಟಲು ಹಾಗೂ ಚಾಲನಾ ತಪಾಸಣೆಗೆ ದಿನಾಂಕ ನೀಡಲಾಗಿದ್ದವರಿಗೆ ಈಗ ಅನುಮತಿ ನೀಡಲಾಗುತ್ತಿದೆ. ಹೊಸದಾಗಿ ದಿನಕ್ಕೆ 30 ರಂಗೆ ಸ್ಲಾಟ್‌ಗಳನ್ನು ನೀಡಲಾಗುತ್ತಿದೆ. ಕರೊನಾ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಕಚೇರಿಗೆ ಬರುವ ಜನರಿಗೆ ದೈಹಿಕ ಅಂತರ ಕಾಪಾಡುವಂತೆ ತಿಳಿ ಹೇಳಲಾಗುತ್ತಿದ್ದರೂ ಜನರು ಕಿವಿಗೊಡದಿರುವುದು ಕಂಡು ಬರುತ್ತಿದೆ. ಕಚೇರಿಯ ಇನ್ನಿತರ ಸೇವೆಗಳನ್ನು ಆರಂಭಿಸಿದಲ್ಲಿ ಜನರು ಸೇರುವ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ.
ಲಾಕ್‌ಡೌನ್ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಗಿದ್ದ ಎಲ್‌ಎಲ್‌ಆರ್ ಮತ್ತು ಡಿಎಲ್ ನೀಡುವ ಕಾರ್ಯಕ್ಕೆ ಸೋಮವಾರದಿಂದ ಪುನಃ ಚಾಲನೆ ನೀಡಲಾಗಿದೆ. ಜನರು ಮತ್ತು ಕಚೇರಿ ಸಿಬ್ಬಂದಿಗೆ ದೈಹಿಕ ಅಂತರ ಕಾಪಾಡುವಂತೆ ಸೂಚನೆ ನೀಡಲಾಗಿದೆ.| ವಿಶಾಲ್ ಪವಾರ್ ಪ್ರಾದೇಶಿಕ ಸಾರಿಗೆ ಅಧಿಕಾರಿ, ರಾಯಚೂರು