ಜಿಲ್ಲೆಯಲ್ಲಿ ನಿರಂತರ ರಸ್ತೆ ಅಪಘಾತ: ಸ್ಪಾಟ್ ಡೆತ್‌ಗಳೇ ಹೆಚ್ಚು: ಕಾಣೆಯಾದ ರಸ್ತೆ ಸುರಕ್ಷತೆ

raichur road accident kalluru
Published on

ರಾಯಚೂರು: ಜಿಲ್ಲೆಯಲ್ಲಿ ದಿನೇ ದಿನೇ ರಸ್ತೆ ಅಪಘಾತಗಳು ಹೆಚ್ಚುತ್ತಿದ್ದು, ಕಳೆದೆರಡು ತಿಂಗಳಲ್ಲಿ ಅತಿ ಹೆಚ್ಚು ಅಪಘಾತಗಳು ಸಂಭವಿಸಿವೆ. ಅಪಘಾತಗಳನ್ನು ತಡೆಯಲು ಪೊಲೀಸ್ ಇಲಾಖೆಯ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.

ಅತಿಯಾದ ವೇಗ, ರಸ್ತೆ ಸಂಚಾರಿ ನಿಯಮಗಳನ್ನು ಪಾಲಿಸದೇ ವಾಹನಗಳನ್ನು ಚಲಾಯಿಸುವುದರಿಂದ ಹಾಗೂ ಜಿಲ್ಲೆಯ ರಸ್ತೆಗಳು ದುಸ್ಥಿತಿಯಲ್ಲಿರುವುದರಿಂದ ಅಪಘಾತಗಳು ಉಂಟಾಗುತ್ತಿವೆ. ಅಪಘಾತದಲ್ಲಿ ಬೇಜವಾಬ್ದಾರಿಯಿಂದ ವಾಹನ ಚಲಾಯಿಸುವವರಗೆ ಮಾತ್ರವಲ್ಲದೇ ರಸ್ತೆಯ ಮೇಲೆ ಓಡಾಡುವವರಿಗೂ ಪ್ರಾಣಪಾಯವಾಗುವ ಸಾಧ್ಯತೆ ಇರುತ್ತದೆ.

ಸೆ.5ರಂದು ಜಿಲ್ಲೆಯ ಮಾನ್ವಿ ತಾಲೂಕಿನ ಕಪಗಲ್ ಬಳಿ ಶಾಲಾ ವಾಹನ ಹಾಗೂ ಸಾರಿಗೆ ಬಸ್ ನಡುವೆ ಡಿಕ್ಕಿಯಾಗಿ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟು, 35ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದರು. ಈ ಘಟನೆ ಇಡೀ ಜಿಲ್ಲೆಯನ್ನು ಬೆಚ್ಚಿಬೀಳಿಸಿತ್ತು.

ಈ ಘಟನೆಯ ನಂತರ ನಿರಂತರವಾಗಿ ರಸ್ತೆ ಅಪಘಾತಗಳು ಸಂಭವಿಸುತ್ತಲೇ ಇವೆ. ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿಗಳು ಸಂಪೂರ್ಣವಾಗಿ ಹದಗೆಟ್ಟು ಹೋಗಿವೆ. ಅ.12ರಂದು ಚಿಕ್ಕಸುಗೂರು ಬಳಿ ದ್ವಿಚಕ್ರ ವಾಹನಕ್ಕೆ ಲಾರಿ ಡಿಕ್ಕಿಯಾದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಸಾವನಪ್ಪಿದ್ದರು. ರಾಯಚೂರು ತಾಲೂಕಿನ ಹೆಗಸನಹಳ್ಳಿ ಬಳಿ ಮಂಗಳವಾರ ಮುಂಜಾನೆ ರಸ್ತೆಯ ಮೇಲೆ ನಡೆದುಕೊಂಡು ಹೋಗುವ ವೇಳೆ ಸಾರಿಗೆ ಬಸ್ ಹರಿದು ಸ್ಥಳದಲ್ಲಿಯೇ 65 ವರ್ಷದ ವೃದ್ಧ ಸಾವನಪ್ಪಿದ್ದಾನೆ.

ನಗರದ ಕೃಷಿ ವಿಶ್ವವಿದ್ಯಾಲಯದ ಎದುರು ಇಬ್ಬರು ಯುವತಿಯರು ಸ್ಕೂಟಿಯಲ್ಲಿ ಬರುವಾಗ ಹಿಂದೆಯಿಂದ ಬಂದ ಕಾರ್ ಸ್ಕೂಟಿಗೆ ಡಿಕ್ಕಿಯಾದ ಪರಿಣಾಮ ಒಬ್ಬ ಯುವತಿ ಸಾವನಪ್ಪಿ ಇನ್ನೊರ್ವ ಯುವತಿ ಕಾಲು ಕಳೆದುಕೊಂಡಿದ್ದಾಳೆ ಈ ಘಟನೆ ವಿಜಯದಶಮಿ ದಿನದಂದೇ ಸಮಭವಿಸಿದೆ.

ಈ ರೀತಿಯ ಅನೇಕ ಅಪಘಾತ ಪ್ರಕರಣಗಳು ಜಿಲ್ಲೆಯಲ್ಲಿ ನಡೆಯುತ್ತಿದ್ದು, ಒಂದು ಘಟನೆ ಮಾಸುವ ಮುನ್ನವೇ ಮತ್ತೊಂದು ಘಟನೆಗಳು ಸಂಭವಿಸುತ್ತಲೇ ಇವೆ. ರಸ್ತೆ ಅಪಘಾತಗಳ ಬಗ್ಗೆ ಹಾಗೂ ಸುರಕ್ಷತಾ ನಿಯಮಗಳ ಪಾಲನೆ ಬಗ್ಗೆ ಪೊಲೀಸರು ಎಷ್ಟೇ ಜಾಗೃತಿ ಹಾಗೂ ಅರಿವು ಮೂಡಿಸುವ ಕಾರ್ಯಕ್ರಮ ಮಾಡುತ್ತಿದ್ದರೂ ಅಪಘಾತಗಳ ಸಂಖ್ಯೆ ಮಾತ್ರ ತಗ್ಗುತ್ತಿಲ್ಲ.

ಜಿಲ್ಲೆಯಲ್ಲಿ ಕಳೆದ ಆಗಸ್ಟ್ ತಿಂಗಳಿನಿಂದ ಈವರೆಗೂ 65 ರಸ್ತೆ ಅಪಘಾತಗಳಾಗಿದ್ದು, ಅದರಲ್ಲಿ ಒಟ್ಟು 68 ಜನ ಮೃತಪಟ್ಟಿದ್ದಾರೆ. ಪ್ರಸ್ತುತ ವರ್ಷದಲ್ಲಿ ಈವರೆಗೆ 232 ಅಪಘಾತ ಪ್ರಕರಣಗಳು ಉಂಟಾಗಿದ್ದು, ಅದರಲ್ಲಿ 250 ಜನರು ಸಾವನಪ್ಪಿದ್ದಾರೆ. 218 ಜನರು ಗಾಯಗೊಂಡಿದ್ದಾರೆ.
ಹೆಚ್ಚಾಗಿ ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸಿದ ದ್ವಿಚಕ್ರವಾಹನ ಸವಾರರು ಮೃತಪಟ್ಟಿದ್ದು, 2024ರಲ್ಲಿ 135 ಜನರು ಹೆಲ್ಮೆಟ್ ರಹಿತವಾಗಿ ವಾಹನ ಚಲಾಯಿಸಿದ್ದರಿಂದ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ.

ಸಂಚಾರಿ ನಿಯಮಗಳನ್ನು ಪಾಲಿಸುವ ಜವಾಬ್ದಾರಿ ನಾಗರಿಕರದ್ದಾಗಿದ್ದು, ಸಾರ್ವಜನಿಕರು ಎಚ್ಚರವಹಿಸಿ ವಾಹನ ಚಲಾಯಿಸಿದ್ದಲ್ಲಿ ಅಪಘಾತಗಳು ಕಡಿಮೆಯಾಗುತ್ತವೆ ಎಂಬುವುದು ಪೊಲೀಸ್ ಇಲಾಖೆಯ ಅಭಿಪ್ರಾಯವಾಗಿದೆ.

ಸಿಸಿಟಿವಿ ಕ್ಯಾಮರಾಗಳು ದುಸ್ಥಿತಿಯಲ್ಲಿ: ಜಿಲ್ಲೆಯ ಪ್ರಮುಖ ವೃತ್ತಗಳು ಮತ್ತು ಪ್ರಮುಖ ಬೀದಿಗಳಲ್ಲಿ ಪೊಲೀಸ್ ಇಲಾಖೆಯಿಂದ ಅಪಘಾತಗಳು ಮತ್ತು ಅಪರಾಧಗಳ ಮೇಲೆ ನಿಗಾ ವಹಿಸುವ ನಿಟ್ಟಿನಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು, ಆದರೆ ಬಹುತೇಕ ಕ್ಯಾಮರಾಗಳು ದುಸ್ಥಿತಿಯಲ್ಲಿದ್ದು, ಪೊಲೀಸ್ ಇಲಾಖೆಯು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದು ಅತ್ಯವಶ್ಯಕವಾಗಿದೆ. ಈಗಾಗಲೇ ರಾಯಚೂರು ನಗರಕ್ಕೆ ಹೊಸ ಸಿಸಿಟಿವಿ ಕ್ಯಾಮರಾಗಳಿಗಾಗಿ 1 ಕೋಟಿ ರೂ.ಅನುದಾನ ಬಂದಿದ್ದು, ಸಿಂಧನೂರಿಗೆ 1.5 ಕೋಟಿ ರೂ. ಹಾಗೂ ಉಳಿದ ಪಟ್ಟಣ ಮತ್ತು ನಗರ ಪ್ರದೇಶಗಳಲ್ಲಿ ಸಿಸಿಟಿವಿಗಳ ಅಳವಡಿಕೆಗೆ ಅನುದಾನವಿದ್ದು, ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲು ಪೊಲೀಸ್ ಇಲಾಖೆ ಮುಂದಾಗಬೇಕಿದೆ.

ಜಿಲ್ಲೆಯಲ್ಲಿ ಅಪಘಾತಗಳನ್ನು ತಪ್ಪಿಸಲು ಜಾಗೃತಿ, ಶಿಕ್ಷಣ ಮತ್ತು ದಂಡ ಎನ್ನುವ ಮೂರು ಯೋಜನೆಗಳನ್ನು ರೂಪಿಸಲಾಗಿದ್ದು, ಮೊದಲು ಜನರಿಗೆ ಅಪಘಾತಗಳ ಬಗ್ಗೆ ಜಾಗೃತಿ ಮೂಡಿಸಿ ಸಂಚಾರಿ ನಿಯಮಗಳ ಕುರಿತು ಶಿಕ್ಷಣ ನೀಡಿ ನಂತರ ತಪ್ಪುಗಳಾದಲ್ಲಿ ದಂಡ ವಿಧಿಸುವ ಕ್ರಮಕ್ಕೆ ಪೊಲೀಸ್ ಇಲಾಖೆ ಕಾರ್ಯ ನಿರ್ವಹಿಸಲಿದೆ. |ಎಂ.ಪುಟ್ಟಮಾದಯ್ಯ, ಎಸ್ಪಿ ರಾಯಚೂರು

ಮೊದಲು ಚಿಕ್ಕ ಮಕ್ಕಳಿಗೆ ವಾಹನಗಳನ್ನು ಕೊಡುವ ಕೆಲಸವನ್ನು ಪೋಷಕರು ನಿಲ್ಲಿಸಬೇಕು. ಅತಿಯಾದ ವೇಗದಿಂದ ಮಕ್ಕಳು ವಾಹನ ಚಲಾಯಿಸುವುದರಿಂದ ಅಪಘಾತ ಹೆಚ್ಚುತ್ತವೆ. | ಅನ್ವರ್, ಸ್ಥಳೀಯ ರಾಯಚೂರು

ಸಂಚಾರಿ ನಿಯಮಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಅಗತ್ಯವಿದ್ದು, ಸಾರ್ವಜನಿಕರೂ ಕೂಡ ಎಚ್ಚರದಿಂದ ವಾಹನಗಳನ್ನು ಚಲಾಯಿಸಬೇಕು. ಪೊಲೀಸ್ ಇಲಾಖೆಯ ನಿಯಮಗಳನ್ನು ಪಾಲಿಸಬೇಕು. | ತಾಯರಾಜ್ ಮರ್ಚಟಹಾಳ್, ಸ್ಥಳೀಯ ರಾಯಚೂರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net