ರೈತರಿಗಾಗುವ ಮೋಸ ತಡೆಯಿರಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಒತ್ತಾಯ

01062021 Raichur Formars insit
Published on

ರೈಸ್‌ಮಿಲ್ ಮಾಲೀಕರಿಂದ ಮೋಸದ ಆರೋಪ

ರಾಯಚೂರು: ಭತ್ತ ಮಾರಾಟದ ಸಂದರ್ಭದಲ್ಲಿ ರೈತರಿಗೆ ರೈಸ್‌ಮಿಲ್ ಮಾಲೀಕರಿಂದಾಗುತ್ತಿರುವ ಮೋಸ ತಡೆಯಲು ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಒತ್ತಾಯಿಸಿದೆ.

ಸಂಘದ ನಿಯೋಗ ಜಿಲ್ಲಾಧಿಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಧಿಕಾರಿ ಪ್ರಶಾಂತ ಕುಮಾರಗೆ ಮಂಗಳವಾರ ಮನವಿ ಸಲ್ಲಿಸಿತು. ಜಿಲ್ಲಾಧಿಕಾರಿ ಕೂಡಲೇ ರೈತರು, ರೈಸ್‌ಮಿಲ್ ಮಾಲೀಕರ ಸಭೆ ಕರೆದು ರೈತರಿಗೆ ಉಂಟಾಗುತ್ತಿರುವ ನಷ್ಟ ತಪ್ಪಿಸಬೇಕು ಎಂದು ಆಗ್ರಹಿಸಿತು.

ರೈಸ್‌ಮಿಲ್ ಮಾಲೀಕರು ರೈತರಿಂದ ಭತ್ತ ಖರೀದಿ ಮಾಡುವಾಗ ಖಾಲಿ ಚೀಲವನ್ನು ರೈತರಿಂದಲೇ ಪಡೆದುಕೊಳ್ಳುತ್ತಾರೆ. ಇದರಿಂದ ರೈತರಿಗೆ ಪ್ರತಿ ಚೀಲಕ್ಕೆ 30 ರಿಂದ 40 ರೂ ನಷ್ಟವಾಗುತ್ತಿದೆ. ಅನ್‌ಲೋಡ್ ವೆಚ್ಚವನ್ನೂ ರೈತರಿಂದ ವಸೂಲಿ ಮಾಡಲಾಗುತ್ತಿದೆ. ರೈಸ್‌ಮಿಲ್ ಮಾಲೀಕರು ಚೀಲದ ಹಣವನ್ನು ಪಾವತಿ ಮಾಡಬೇಕು. ಅನ್‌ಲೋಡ್ ವೆಚ್ಚವನ್ನು ಅವರೇ ಭರಿಸಬೇಕು. ಲಾಕ್‌ಡೌನ್‌ನಿಂದ ಎಪಿಎಂಸಿಗಳು ಬಂದ್ ಆಗಿದ್ದರಿಂದ ರೈತರಿಗೆ ಮೋಸವಾಗುತ್ತಿದೆ. ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರದ ಗೋದಾಮುಗಳಲ್ಲಿ ಉಚಿತ ಭತ್ತ ಶೇಖರಣೆ ಮಾಡಲು ಅನುಕೂಲ ಮಾಡಿಕೊಡಬೇಕು. ಭತ್ತ ಖರೀದಿಗೆ ನೋಂದಣಿಯಾದ ರೈತರಿಂದ ಭತ್ತ ಖರೀದಿ ಮಾಡಬೇಕು. ಮುಂಗಾರು ಆರಂಭವಾಗುತ್ತಿರುವುದರಿಂದ ರೈತ ಸಂಪರ್ಕ ಕೇಂದ್ರದಲ್ಲಿ ಬೀಜ ಮತ್ತು ರಸಗೊಬ್ಬರ ವಿತರಣೆ ಮಾಡಬೇಕು. ಖಾಸಗಿಯಲ್ಲಿ ರಸಗೊಬ್ಬರ ಪಡೆಯಲು ಸಮಯ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net