ಭತ್ತ ಖರೀದಿ ಕೇಂದ್ರ ಆರಂಭಿಸುವಂತೆ ಸರ್ಕಾರಕ್ಕೆ ಕರ್ನಾಟಕ ರೈತ ಸಂಘ ಮನವಿ

08112021 raichur formars protest
Published on

ರಾಯಚೂರು: ಭತ್ತ ಇನ್ನಿತರ ಕೃಷಿ ಉತ್ಪನ್ನಗಳ ಖರೀದಿ ಕೇಂದ್ರ ಆರಂಭ ಹಾಗೂ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಸ್ಥಳೀಯ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಕರ್ನಾಟಕ ರೈತ ಸಂಘದಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ನಂತರ ಜಿಲ್ಲಾಧಿಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಧಿಕಾರಿ ಪ್ರಶಾಂತಕುಮಾರಗೆ ಮನವಿ ಸಲ್ಲಿಸಿ, ಪ್ರತಿ ವರ್ಷ ಕೃಷಿ ಉತ್ಪನ್ನಗಳನ್ನು ಮಾರಿದ ನಂತರ ಸರ್ಕಾರಿ ಖರೀದಿ ಕೇಂದ್ರ ಆರಂಭಿಸುತ್ತಿರುವುದರಿಂದ ರೈತರಿಗೆ ಉಪಯೋಗವಾಗುತ್ತಿಲ್ಲ. ಕೃಷಿ ಉತ್ಪನ್ನ ಖರೀದಿಗೆ ಕಾಯ್ದೆ ರೂಪಿಸದೆ ಎಲ್ಲ ಪಕ್ಷಗಳು ರೈತರಿಗೆ ದ್ರೋಹ ಮಾಡಿವೆ. ಬೆಂಬಲ ಬೆಲೆ ನೀತಿ ಕೃಷಿಕರ ಕಣ್ಣೀರು ಒರೆಸುವ ತಂತ್ರವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಬೆಂಬಲ ಬೆಲೆ ನೀಡಿಕೆ ಮತ್ತು ಖರೀದಿ ಕೇಂದ್ರ ತೆರೆಯುವ ವಿಷಯದಲ್ಲಿ ನಾಟಕವಾಡಿ ವ್ಯಾಪಾರಿಗಳಿಗೆ ಲಾಭ ಮಾಡಿಕೊಡುತ್ತಿವೆ ಎಂದು ದೂರಲಾಯಿತು.

ಈಗಾಗಲೆ ಭತ್ತ, ಸಜ್ಜೆ, ಮೆಕ್ಕೆಜೋಳ ಇತರ ಉತ್ಪನ್ನಗಳ ಕಟಾವು ನಡೆಯುತ್ತಿದೆ. ಸರ್ಕಾರ ಕೂಡಲೇ ಖರೀದಿ ಕೇಂದ್ರ ತೆರೆದು ರೈತರ ನೆರವಿಗೆ ಬರಬೇಕು. ಬೆಳೆ ಕಟಾವಿಗೆ ಮುಂಚೆ ಪಂಚಾಯಿತಿಗೆ ಒಂದರಂತೆ ಖರೀದಿ ಕೇಂದ್ರ ತೆರೆದಲ್ಲಿ ರೈತರಿಗೆ ಅನುಕೂಲವಾಗಲಿದೆ.

ಕೃಷಿ ಉತ್ಪನ್ನಗಳಿಗೆ 500 ರಿಂದ ಸಾವಿರ ರೂ. ಪ್ರೋತ್ಸಾಹಧನ ನೀಡಬೇಕು. ಆಂಧ್ರ ಮತ್ತು ತೆಲಂಗಾಣ ಮಾದರಿಯಲ್ಲಿ 50 ಲಕ್ಷ ಮೆಟ್ರಿಕ್ ಟನ್ ಭತ್ತ ಖರೀದಿಸಬೇಕು. ಖರೀದಿಸಿದ ಮೂರು ದಿನದೊಳಗೆ ರೈತರಿಗೆ ಹಣ ಪಾವತಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಯಿತು.
ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಡಿ.ಎಚ್.ಪೂಜಾರ, ಪದಾಧಿಕಾರಿಗಳಾದ ಜಿ. ಅಮರೇಶ, ಅಶೋಕ ನಿಲೋಗಲ್, ಮಲ್ಲಯ್ಯ ಕಟ್ಟಿಮನಿ, ಬಿ.ಎನ್. ಯರದಿಹಾಳ, ಮುದಕಪ್ಪ ನಾಯಕ, ರಮೇಶ ಪಾಟೀಲ್, ಸಂತೋಷ ದಿನ್ನಿ, ನಾಗರಾಜ ಬೊಮ್ಮನಾಳ, ದುರಗಣ್ಣ ಪಾಲ್ಗೊಂಡಿದ್ದರು.

08-11-ಶಿವಾ-1
ಭತ್ತ ಇನ್ನಿತರ ಕೃಷಿ ಉತ್ಪನ್ನಗಳ ಖರೀದಿ ಕೇಂದ್ರ ಆರಂಭಕ್ಕೆ ಒತ್ತಾಯಿಸಿ ರಾಯಚೂರಿನ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಕರ್ನಾಟಕ ರೈತ ಸಂಘದಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು. ಸಂಘದ ಅಧ್ಯಕ್ಷ ಡಿ.ಎಚ್.ಪೂಜಾರ, ಪದಾಧಿಕಾರಿಗಳಾದ ಜಿ.ಅಮರೇಶ, ಅಶೋಕ ನಿಲೋಗಲ್, ಮಲ್ಲಯ್ಯ ಕಟ್ಟಿಮನಿ, ಬಿ.ಎನ್.ಯರದಿಹಾಳ, ಮುದಕಪ್ಪ ನಾಯಕ, ರಮೇಶ ಪಾಟೀಲ್, ಸಂತೋಷ ದಿನ್ನಿ, ನಾಗರಾಜ ಬೊಮ್ಮನಾಳ, ದುರಗಣ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net