7ರಂದು ರಾಯಚೂರು ಜಿಲ್ಲೆ ಬಂದ್; ಶಾಸಕ ಡಾ.ಶಿವರಾಜ ಪಾಟೀಲ್ ಮಾಹಿತಿ

MLA Dr Shivaraj Patil Raichur - Copy
??????????
Published on

ನವೋದಯ ಶಿಕ್ಷಣ ಸಂಸ್ಥೆ ನಡೆಗೆ ವಿರೋಧ


ರಾಯಚೂರು: ನವೋದಯ ಶಿಕ್ಷಣ ಸಂಸ್ಥೆ ಕಲಂ 371(ಜೆ) ಮೀಸಲಾತಿ ವಿರೋಧಿಸಿ ಹೈಕೋರ್ಟ್‌ಗೆ ಸಲ್ಲಿಸಿರುವ ರಿಟ್ ಅರ್ಜಿಯನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿ ಮಾ.7ರಂದು ಕಲ್ಯಾಣ ಕರ್ನಾಟಕ 371 (ಜೆ) ಅನುಷ್ಠಾನ ಹೋರಾಟ ಸಮಿತಿಯಿಂದ ರಾಯಚೂರು ಜಿಲ್ಲೆ ಬಂದ್ ನಡೆಸಲಾವುದು ಎಂದು ಶಾಸಕ ಡಾ.ಶಿವರಾಜ ಪಾಟೀಲ್ ತಿಳಿಸಿದರು.

ಸ್ಥಳೀಯ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದರು. ಈ ಭಾಗದ ವಿದ್ಯಾರ್ಥಿಗಳಿಗೆ 371 (ಜೆ) ಅಡಿ ಸಿಗುತ್ತಿದ್ದ ಮೀಸಲಾತಿ ಮೊಟಕುಗೊಳಿಸುವಂತೆ ನವೋದಯ ಶಿಕ್ಷಣ ಸಂಸ್ಥೆ ಸಲ್ಲಿಸಿರುವ ರಿಟ್ ಅರ್ಜಿ ವಿರುದ್ಧ ಈಗಾಗಲೇ ಒಂದು ಹಂತದ ಹೋರಾಟ ನಡೆದಿದ್ದು, ಹಂತ ಹಂತವಾಗಿ ಹೋರಾಟ ನಡೆಸಲಾಗುವುದು. ಹೋರಾಟದಿಂದ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ನೂರಾರು ವಿದ್ಯಾರ್ಥಿಗಳಿಗೆ ವೈದ್ಯಕೀಯ ಕಾಲೇಜು ಪ್ರವೇಶ ದೊರೆತಿದೆ. ಆದರೆ, ರಿಟ್ ಅರ್ಜಿಯನ್ನು ವಾಪಸ್ ಪಡೆಯುವವರೆಗೆ ಕಾನೂನಾತ್ಮಕವಾಗಿ ಹಾಗೂ ಈ ಭಾಗದ ಎಲ್ಲ ಶಾಸಕರು ಸದನದಲ್ಲಿ ಧ್ವನಿ ಎತ್ತುವ ಮೂಲಕ ಹೋರಾಟ ನಡೆಸಲಾಗುವುದು ಎಂದು ಹೇಳಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವಿರೂಪಾಕ್ಷಿ ಮಾತನಾಡಿ, ನವೋದಯ ಶಿಕ್ಷಣ ಸಂಸ್ಥೆ ಮೀಸಲಾತಿಯಂತೆ ಈ ಬಾರಿ ಪ್ರವೇಶ ನೀಡಿದ್ದರೂ ಕೋರ್ಟ್‌ನಲ್ಲಿರುವ ದಾವೆಯನ್ನು ಮುಂದುವರಿಸಿದ್ದಾರೆ. ಸಮಸ್ಯೆ ಇತ್ಯರ್ಥಕ್ಕೆ ಸಂಸ್ಥೆ ಅಧ್ಯಕ್ಷ ಎಸ್.ಆರ್.ರೆಡ್ಡಿಗೆ ಎರಡು ಬಾರಿ ಮಾತುಕತೆಗೆ ಆಹ್ವಾನಿಸಲಾಗಿದ್ದರೂ ಅವರು ಬರಲಿಲ್ಲ. ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪಕ್ಷಾತೀತವಾಗಿ ಎಲ್ಲ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಜಿಲ್ಲೆ ಬಂದ್ ನಡೆಸಲಾಗುತ್ತಿದೆ. ಜತೆಗೆ ಅನುದಾನಿತ, ಅನುದಾನ ರಹಿತ ಕಾಲೇಜುಗಳ ಒಕ್ಕೂಟದಿಂದ ಕಾನೂನು ಹೋರಾಟವನ್ನು ನಡೆಸಲಾಗುತ್ತಿದೆ. ತುರ್ತು ಸೇವೆಗಳನ್ನು ಹೊರತು ಪಡಿಸಿ ಎಲ್ಲವನ್ನು ಬಂದ್ ಮಾಡುವ ನಿಟ್ಟಿನಲ್ಲಿ ಕೆಕೆಆರ್‌ಟಿಸಿ ವಿಭಾಗೀಯ ವ್ಯವಸ್ಥಾಪಕರು, ಡಿಡಿಪಿಐಗೆ ಸಹಕರಿಸುವಂತೆ ಮನವಿ ಮಾಡಲಾಗಿದೆ. ಹಲವಾರು ಸಂಘಟನೆಗಳು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿವೆ ಎಂದು ತಿಳಿಸಿದರು.

ಮಾಜಿ ಶಾಸಕ ಎ.ಪಾಪಾರೆಡ್ಡಿ, ಬಿಜೆಪಿ ಜಿಲ್ಲಾಧ್ಯಕ್ಷ ರಮಾನಂದ ಯಾದವ, ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ ಉಪಾಧ್ಯಕ್ಷ ಡಾ.ರಜಾಕ್ ಉಸ್ತಾದ್, ರವೀಂದ್ರ ಜಲ್ದಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net