ಆರ್‌ಡಿಸಿಸಿ ಬ್ಯಾಂಕ್‌ನಿಂದ ಹಗಲು ದರೋಡೆ: ಆರ್.ಮಾನಸಯ್ಯ ಆರೋಪ

oplus_2
oplus_2
Published on

ರಾಯಚೂರು: ಆರ್‌ಡಿಸಿಸಿ ಬ್ಯಾಂಕ್‌ನಲ್ಲಿ ಸಾಲ ಪಡೆಯದಿದ್ದರೂ ರೈತರಿಗೆ ಸಾಲ ಪಾವತಿ ಮಾಡುವಂತೆ ನೋಟಿಸ್ ನೀಡಲಾಗುತ್ತಿದೆ ಎಂದು ಟಿಯುಸಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆರ್.ಮಾನಸಯ್ಯ ಆರೋಪಿಸಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಭಾನುವಾರ ಮಾತನಾಡಿ, ರೈತರು ಸಾಲಕ್ಕಾಗಿ ಯಾವುದೇ ಅರ್ಜಿಯನ್ನು ಹಾಕಿಲ್ಲ, ಸಾಲವನ್ನು ಪಡೆದುಕೊಂಡಿಲ್ಲ. ಆರ್‌ಡಿಸಿಸಿ ಬ್ಯಾಂಕ್‌ನಿಂದ ರೈತರ ಖಾತೆಗಳಿಗೆ ಸಾಲದ ಹಣ ಜಮಾ ಮಾಡಿ, ಖಾತೆಯಿಂದ ವಾಪಸ್ ತೆಗೆದುಕೊಂಡು ರೈತರಿಗೆ ಸಾಲ ಪಾವತಿ ಮಾಡುವಂತೆ ನೋಟಿಸ್ ನೀಡುವ ಮೂಲಕ ಬ್ಯಾಂಕ್‌ನಿಂದ ಹಗಲು ದರೋಡೆ ಮಾಡಲಾಗುತ್ತಿದೆ ಎಂದು ಹೇಳಿದರು.

ಪ್ರಸ್ತುತ ಮುದಗಲ್ ಪೊಲೀಸ್ ಠಾಣೆಯಲ್ಲಿ ಆರ್‌ಡಿಸಿಸಿ ಕಚೇರಿಯ ಅಧಿಕಾರಿಗಳು ಮತ್ತು ನಿರ್ದೇಶಕರ ಮೇಲೆ ಇದೇ ವಿಚಾರವಾಗಿ 5 ಪ್ರಕರಣಗಳು ದಾಖಲಾಗಿದ್ದು, ಜಿಲ್ಲೆಯಲ್ಲಿ ಈ ರೀತಿಯಾಗಿ ಸಾಕಷ್ಟು ಅವ್ಯವಹಾರ ನಡೆದಿದೆ. ರೈತರು ಸಾಲ ಪಡೆಯದೇ ಇದ್ದರೂ. ಸಾಲ ಪಾವತಿ ಮಾಡುವಂತೆ ಬ್ಯಾಂಕ್ ತಿಳಿಸುತ್ತಿದ್ದು, ಇದರಿಂದ ರೈತರು ಕಂಗಾಲಾಗಿದ್ದಾರೆ ಎಂದು ತಿಳಿಸಿದರು.

ಕೂಡಲೇ ರಾಜ್ಯ ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಹಗರಣದಲ್ಲಿ ಭಾಗಿಯಾದ ಅಧಿಕಾರಿಗಳು, ಸಿಬ್ಬಂದಿ ಹಾಗೂ ನಿರ್ದೇಶಕರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಈ ರೀತಿಯಾಗಿ ಸಹಕಾರಿ ಇಲಾಖೆಯಲ್ಲಿ ಇನ್ನೂ ಹೆಚ್ಚಿನ ಅವ್ಯವಹಾರವಾಗಿರುವ ಸಾಧ್ಯತೆಯಿದ್ದು, ಈಗ ದಾಕಲಾಗಿರುವ ಪ್ರಕರಣಗಳನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಮಲ್ಲಯ್ಯ ಕಟ್ಟಿಮನಿ, ಅಬ್ಬಾಸ ಅಲಿ, ಅಜೀಜ್ ಜಾಗೀರದಾರ, ಗಿರಿಲಿಂಗ ಸ್ವಾಮಿ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net