

ರಾಯಚೂರು: ಕಲಿಯುಗದಲ್ಲಿ ಸಜ್ಜನರ ಸಂರಕ್ಷಣೆ, ದುರ್ಜನರ ನಿಗ್ರಹ ಕಾರ್ಯವನ್ನು ರಾಯರು ಮಾಡುತ್ತಿದ್ದಾರೆ ಎಂದು ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರು ಹೇಳಿದರು.
ಮಂತ್ರಾಲಯ ಶ್ರೀಮಠದಲ್ಲಿ ಶ್ರೀ ರಾಘವೇಂದ್ರಸ್ವಾಮಿಗಳ ಪಟ್ಟಾಭಿಷೇಕದ 401ನೇ ಮಹೋತ್ಸವ ನಿಮಿತ್ತ ಶುಕ್ರವಾರ ರಾಯರ ಪಾದುಕೆಗಳಿಗೆ ವಿಶೇಷ ಪೂಜೆ ನೆರವೇರಿಸಿದ ನಂತರ ಆಶೀರ್ವಚನ ನೀಡಿದರು. ಜಗತ್ತಿನ ಸಜ್ಜನರ ಸಾಧನೆಗೆ ಪ್ರೇರಣೆ ಶಕ್ತಿಯಾಗಿ ರಾಯರು ನೆಲೆ ನಿಂತಿದ್ದಾರೆ. ಅಜ್ಞಾನ ಕಳೆದು ಜ್ಞಾನದ ಬೆಳಕು ಮೂಡಿಸುವ ಕಾರ್ಯ ರಾಯರಿಂದ ನಡೆಯುತ್ತಿದೆ. ರಾಯರ ಪಟ್ಟಾಭಿಷೇಕ ಹಾಗೂ ವರ್ಧಂತಿ ಮಹೋತ್ಸವಗಳು ಪರಮ ಪವಿತ್ರ ದಿನಗಳಾಗಿವೆ ಎಂದರು.
ಧರ್ಮಸ್ಥಳದಂತೆ ಮಂತ್ರಾಲಯವೂ ಭಕ್ತರ ಪೂಜಿತ ಸ್ಥಳ. ಧರ್ಮಸ್ಥಳ-ಮಂತ್ರಾಲಯ ಮಠದ ನಡುವೆ ಅವಿನಾಭಾವ ಸಂಬಂಧವಿದೆ. 2009ರ ಪ್ರವಾಹ ಸಂದರ್ಭ ಧರ್ಮಸ್ಥಳದ ಕಾರ್ಯಕರ್ತರು ಸೇವೆಯಲ್ಲಿ ತೊಡಗಿದ್ದರು. ಶ್ರೀ ವೀರೇಂದ್ರ ಹೆಗ್ಗಡೆಯವರು ಮಂತ್ರಾಲಯದ ಬಗ್ಗೆ ಗೌರವ ಹೊಂದಿದ್ದಾರೆಂದರು.
ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ ಮಾತನಾಡಿದರು. ಸಂಸ್ಕೃತ ವಿದ್ಯಾಪೀಠದ ಕುಲಪತಿ ಡಾ.ವಿ.ಆರ್.ಪಂಚಮುಖಿ, ಶ್ರೀಮಠದ ವ್ಯವಸ್ಥಾಪಕ ವೆಂಕಟೇಶ ಜೋಷಿ, ಅಪಾರ ಸಂಖ್ಯೆ ಭಕ್ತರಿದ್ದರು.