ನಿಯಮ ಪಾಲಿಸಿ, ರಾಯರ ದರ್ಶನ ಪಡೆಯಿರಿ; ಮಂತ್ರಾಲಯ ಮಠದ ಪ್ರಕಟಣೆ

15032020 Mantralaya Muth coronavirus
Published on

ವದಂತಿ ನಂಬದಿರಿ, ಸಮಾರಂಭಗಳಿಗೆ ಕಡಿಮೆ ಜನ ಬನ್ನಿ

ರಾಯಚೂರು : ರಾಯರ ವೃಂದಾವಂದನ ದರ್ಶನ ಅಭಾದಿತ ಎಂದಿರುವ ಮಂತ್ರಾಲಯ ಶ್ರೀ ರಾಘವೇಂದ್ರ ಮಠವು, ಮದುವೆ ಮತ್ತಿತರ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಜನ ಸೇರುವಂತಿಲ್ಲ ಎಂಬ ಸಂದೇಶ ನೀಡಿದೆ.

ಕರೊನಾ ಸೋಂಕು ಹಿನ್ನೆಲೆಯಲ್ಲಿ ವಿದೇಶಿಯರು, ವಿದೇಶದಿಂದ ಬಂದ ಭಾರತೀಯರು ಕನಿಷ್ಠ 15 ದಿನದವರೆಗೆ ಶ್ರೀಮಠಕ್ಕೆ ಬರಬಾರದೆಂದು ಶನಿವಾರ ಮನವಿ ಮಾಡಿತ್ತು. ಅದನ್ನು ತಪ್ಪಾಗಿ ಅರ್ಥೈಸಿಕೊಂಡ ಕೆಲವರು, ರಾಯರ ದರ್ಶನಕ್ಕೆ ಅವಕಾಶವಿಲ್ಲ, ಮಠ ಮುಚ್ಚಲಾಗುವುದು ಎಂಬ ಸಂದೇಶವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದಾರೆ. ಇದರಿಂದ ಗಲಿಬಿಲಿಗೊಂಡ ಶ್ರೀಮಠದ ಆಡಳಿತ ಮಂಡಳಿ ವ್ಯವಸ್ಥಾಪಕ ಎಸ್.ಕೆ.ಶ್ರೀನಿವಾಸರಾವ್ ಪ್ರಕಟಣೆ ನೀಡಿದ್ದು, ವದಂತಿಗೆ ಕಿವಿಗೊಡಬಾರದು. ಭಕ್ತರಿಗೆ ರಾಯರ ದರ್ಶನ ಅಭಾದಿತ. ಮುಂಗಡವಾಗಿ ಮದುವೆ, ಮತ್ತಿತರ ಕಾರ್ಯಕ್ರಮಗಳನ್ನು ನೋಂದಾಯಿಸಿಕೊಂಡ ಭಕ್ತರು, ಮುಂದಿನ 15 ದಿನಗಳ ಕಾಲ ವಧು-ವರರ ಕಡೆಯ ತಲಾ 10 ರಿಂದ 15 ಜನ ಮಾತ್ರವೇ ಬಂದು ಮದುವೆ ಮುಗಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.

ಮಠದಲ್ಲಿ ಪಂಚಾಮೃತ ಮಾತ್ರ ನಿಷಿದ್ಧವಾಗಿದ್ದು, ಪ್ರಸಾದ ಎಂದಿನಂತಿದೆ. ಭಕ್ತರು ತಮ್ಮೊಂದಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ತರುವ ಜತೆಗೆ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವುದು ಕಡ್ಡಾಯ ಎಂದು ತಿಳಸಿದ್ದಾರೆ.

ವದಂತಿಗೆ ಕಿವಿಗೊಡದಂತೆ ನಟ ಜಗ್ಗೇಶ್ ಟ್ವೀಟ್

ರಾಯಚೂರು: ಮಂತ್ರಾಲಯ ಮಠ ಮುಚ್ಚಲಾಗುತ್ತಿದೆ ಎಂಬ ವದಂತಿಗೆ ಕಿವಿಗೊಡದಂತೆ ರಾಯರ ಭಕ್ತ ಹಾಗೂ ನಟ ಜಗ್ಗೇಶ ಟ್ವೀಟ್ ಮಾಡಿದ್ದಾರೆ. ಶ್ರೀಮಠದ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದ ಇಂಗ್ಲಿಷ್ ಹೇಳಿಕೆ ಸಮೇತ ಟ್ವಿಟರ್‌ನಲ್ಲಿ ಸಂದೇಶ ಹಾಕಿರುವ ಜಗ್ಗೇಶ್ ‘ಆತ್ಮೀಯ ಸಹೃದಯರ ಮಾಹಿತಿಗೆ, ಮಾನ್ಯರೇ ಭವರೋಗ ವೈದ್ಯ ನಮ್ಮ ಗುರುರಾಯರು. ಮಠ ಕರೊನಾ ಹರಡುವಿಕೆ ಪ್ರಯುಕ್ತ ಮುಚ್ಚಲಾಗುತ್ತೆ ಎನ್ನುವ ವದಂತಿ ನಂಬದಿರಿ. ನನ್ನ ಹುಟ್ಟುಹಬ್ಬದ ಪ್ರಯುಕ್ತ ಅಲ್ಲೆ ಇರುವೆ. ರಾಯರು ರೋಗ ರಾಗ ದ್ವೇಷ ಸಂಕಷ್ಟ ದೂರಮಾಡೋ ಮಹನಿಯರು’ ಎಂದು ಪೋಸ್ಟ್ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net