

ರಾಯಚೂರು: ಭಗತ್ ಸಾಂಸ್ಕೃತಿಕ ಸೇವಾ ಸಂಘದ ವತಿಯಿಂದ ರಂಗರಥ ಎಂಬ ಮೂರು ದಿನಗಳ ರಂಗೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ವಿ.ಎನ್ ಅಕ್ಕಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿ, ಅ.15, 16, 17ರಂದು ಸಂಜೆ 6.30ಕ್ಕೆ ನಗರದ ಕನ್ನಡ ಭವನದಲ್ಲಿ ರಂಗೋತ್ಸವ ಕಾರ್ಯಕ್ರಮ ಜರುಗಲಿದ್ದು, 15ಕ್ಕೆ ಕೃಷ್ಣ ಸಂಧಾನ, 16ಕ್ಕೆ ಮೋಳಿಗೆ ಮಾರಯ್ಯ ಹಾಗೂ 17ರಂದು ಸರಸತಿಯಾಗಲೊಲ್ಲೆ ಎಂಬ ನಾಟಕವನ್ನು ಪ್ರದರ್ಶಿಸಲಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಏಮ್ಸ್ ಹೋರಾಟ ಸಮಿತಿಯ ಪ್ರಧಾನ ಸಂಚಾಲಕ ಬಸವರಾಜ್ ಕಳಸ ನೆರವೇರಿಸಲಿದ್ದು, ಪತ್ರಕರ್ತ ಸಂಘದ ಪ್ರಮುಖರಾದ ಚೆನ್ನಬಸವಣ್ಣ, ಆರ್.ಗುರುನಾಥ, ಕಸಾಪ ತಾಲೂಕಾಧ್ಯಕ್ಷ ವೆಂಕಟೇಶ ಬೇವಿನಬೆಂಚಿ ಉಪಸ್ಥಿತರಿರಲಿದ್ದಾರೆ ಎಂದರು.
ಸಮಾರೋಪ ಸಮಾರಂಭದಲ್ಲಿ ಸಾಹಿತಿ ವೀರ ಹನುಮಾನ, ಅಯ್ಯಪ್ಪಯ್ಯ ಹುಡಾ, ಪ್ರಮುಖರಾದ ವಿಜಯರಾಜೇಂದ್ರ, ಪ್ರವೀಣ ರೆಡ್ಡಿ, ನಿರ್ಮಲ ವೇಣುಗೋಪಾಲ ಇರಲಿದ್ದಾರೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಪ್ರಮುಖರಾದ ರಂಗಸ್ವಾಮಿ, ನರಸಿಂಹಲು ಇದ್ದರು.