

ರಾಯಚೂರು: ಮಳೆಯಿಂದಾಗಿ ಬೆಳೆದ ಈರುಳ್ಳಿ ಕೊಳೆತು ಹೋಗಿದ್ದು, ಕೊಳೆತ ಈರುಳ್ಳಿಗೆ ಮಾರುಕಟ್ಟೆಯಲ್ಲಿ ಬೆಲೆ ಸಿಗದ ಕಾರಣ ರೈತರು ಕಂಗಾಲಾಗಿದ್ದಾರೆ.
ರಾಯಚೂರು ತಾಲೂಕಿನ ಚಂದ್ರಬಂಡಾ ಹೋಬಳಿಯಲ್ಲಿ ರೈತರು ಬೆಳೆದ ಈರುಳ್ಳಿ ಕಳೆದ ಮೂರು ದಿನಗಳಿಂದ ನಿರಂತರ ಮಳೆಯಿಂದಾಗಿ ಭೂಮಿಯಲ್ಲಿಯೇ ಕೊಳೆತು ಹೋಗಿವೆ.
ವಾಯು ಭಾರ ಕುಸಿತದಿಂದ ಉಂಟಾದ ನಿರಂತರ ಮಳೆಗೆ ತಾಲೂಕಿನ ಕಡಗಂದೊಡ್ಡಿ, ಕುರುಬದೊಡ್ಡಿ, ಅರಸಿಗೇರಾ, ಚಂದ್ರಬಂಡಾ ಸೇರಿದಂತೆ ಇತರೆ ಗ್ರಾಮಗಳಲ್ಲಿ ಬೆಳೆದ ಈರುಳ್ಳಿ ಬೆಳೆ, ರೈತರ ಪಾಲಿನ ಆರ್ಥಿಕ ಸಂಕಷ್ಟಕ್ಕೆ ಕಾರಣವಾಗಿದೆ. ಸತತ ಮಳೆಯಿಂದಾಗಿ ಹೊಲದಲ್ಲಿ ನೀರು ನಿಂತು ಈರುಳ್ಳಿ ಬೆಳೆಗೆ ಹಾನಿ ಉಂಟಾಗಿದೆ.
ಮಳೆ ರೈತರಿಗೆ ಆರ್ಥಿಕ ಶಾಪವಾಗಿ ಮಾರ್ಪಟ್ಟಿದ್ದು, ಕೂಡಲೇ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಈರುಳ್ಳಿ ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ಒಂದು ಎಕರೆಗೆ 50 ಸಾವಿರದ ವರೆಗೆ ಖರ್ಚು ಮಾಡಿದ್ದು, ಇಳುವರಿ ತೀರ ಕಡಿಮೆ ಬಂದಿದೆ. ಅದರಲ್ಲೂ ಈರುಳ್ಳಿ ಕೊಳೆತಿರುವುದು. ತುಂಬಾ ತೊಂದರೆ ಉಂಟು ಮಾಡಿದೆ ಎಂದು ರೈತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ರೈತರು ಮುಂಗಾರಿನಲ್ಲಿ ಈರುಳ್ಳಿ ಬೆಳೆಯನ್ನು ಬೆಳೆದಿದ್ದು, ಕಟಾವಿನ ವೇಳೆ ಮಳೆಯಾಗಬಾರದಿತ್ತು. ಜಮೀನಿನಲ್ಲಿರುವ ಈರುಳ್ಳಿಗೆ ಮಳೆಯ ನೀರಿನಿಂದ ಹಾನಿ ಉಂಟಾಗಿದ್ದು, ಬೆಳೆ ಪರಿಹಾರಕ್ಕೆ ಸ್ಥಳ ಪರಿಶೀಲನೆ ನಡೆಸಿ ನಿಯಮಾನುಸಾರ ಬೆಳೆ ಪರಿಹಾರಕ್ಕೆ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ ಎಂದು ತೋಟಗಾರಿಕೆ ಇಲಾಖೆ ತಿಳಿಸಿದೆ.
ಈರುಳ್ಳಿ ಬೆಳೆಗೆ ಹಾನಿ ಉಂಟಾಗಿದ್ದು, ರೈತರು ಖರ್ಚು ಮಾಡಿದಷ್ಟು ಹಣವನ್ನು ಸರ್ಕಾರ ನೀಡಲೇಬೇಕು. ಬೆಳೆ ಪರಿಹಾರ ನೀಡಲು ಅಧಿಕಾರಿಗಳು ವಿಳಂಬ ಮಾಡಬಾರದು. | ಲಕ್ಷ್ಮಣಗೌಡ ಕಡಗಂದೊಡ್ಡಿ, ರೈತ ಮುಖಂಡ, ರಾಯಚೂರು
ಹಾನಿಗೊಳಗಾದ ಜಮೀನುಗಳಿಗೆ ಸಹಾಯಕ ತೋಟಗಾರಿಕಾ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿಯನ್ನು ಸಿದ್ಧಪಡಿಸುವಂತೆ ಸೂಚಿಸಲಾಗುತ್ತದೆ. ವರದಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಲಾಗುತ್ತದೆ.| ಮಹ್ಮದ್ ಅಲಿ, ಉಪನಿರ್ದೇಶಕ, ತೋಟಗಾರಿಕೆ ಇಲಾಖೆ ರಾಯಚೂರು.