

ರಾಯಚೂರು: ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಸೇರಿದಂತೆ ಕಲಬುರಗಿ ಹಾಗೂ ಭೀಮರಾಯಯನಗುಡಿ ಕೃಷಿ ಮಹಾವಿದ್ಯಾಲಯಗಳಿಗೆ ಭೇಟಿ ನೀಡಿದ್ದ ರಾಷ್ಟ್ರ ಮಟ್ಟದ ಮಾನ್ಯತಾ ಮತ್ತು ಪರಿಶೀಲನಾ ತಂಡ ವಿವಿಗೆ ಎ ಶ್ರೇಣಿ ನೀಡಿದೆ.
ನವದೆಹಲಿಯ ಭಾರತೀಯ ಕೃಷಿ ಅನುಸಂಧಾನ ಪರಿಷತ್ ವತಿಯಿಂದ ರಚಿಸಲಾದ ರಾಷ್ಟ್ರ ಮಟ್ಟದ ಮಾನ್ಯತಾ ಪರಿಶೀಲನಾ ತಂಡವು ಮೇ 28 ರಿಂದ 30ರ ವರೆಗೆ ಮೂರು ದಿನಗಳ ಕಾಲ ವಿವಿಗೆ ಭೇಟಿ ನೀಡಿ ನಿಗದಿತ ವೇಳಾಪಟ್ಟಿಯನುಸಾರ ಪ್ರಮುಖವಾಗಿ ಬೋಧನೆ, ಸಂಶೋಧನೆ, ವಿಸ್ತರಣಾ ಚಟುವಟಿಕೆಗಳನ್ನು ಕೂಲಂಕಷವಾಗಿ ಪರಾಮರ್ಶಿಸಿತು. ಜತೆಗೆ ವಿದ್ಯಾರ್ಥಿಗಳೊಂದಿಗೆ, ರೈತರೊಂದಿಗೆ, ಕೃಷಿ ಸಂಬಂಧಿತ ಉದ್ಯಮಿಗಳೊಂದಿಗೆ ಹಾಗೂ ವಿಜ್ಞಾನಿಗಳೊಂದಿಗೆ ಸಂವಾದ ನಡೆಸಿ, ವಿವಿ ಚಟುವಟಿಕೆಗಳನ್ನು ಸಮಗ್ರವಾಗಿ ಪರಿಶೀಲನೆ ನಡೆಸಿತ್ತು. ಗುಜರಾತ್ ಆನಂದ ಕೃಷಿ ವಿವಿ ಕುಲಪತಿ ಡಾ.ಕೆ.ಬಿ.ಕಥೇರಿಯಾ ನೇತೃತ್ವದ ತಂಡದಿಂದ ಸಮಗ್ರ ಚಟುವಟಿಕೆಗಳ ಪರಾಮರ್ಶೆ ನಡೆಸಿತ್ತು.
ಸಮಿತಿ ವರದಿ ಆಧಾರದ ಮೇಲೆ ರಾಯಚೂರು ಕೃಷಿ ವಿಶ್ವವಿದ್ಯಾಲಯಕ್ಕೆ ಭಾರತೀಯ ಕೃಷಿ ಅನುಸಂಧಾನ ಪರಿಷತ್‌ನ ಮಾನ್ಯತಾ ಮಂಡಳಿಯಿಂದ ಮುಂದಿನ ಐದು ವರ್ಷಗಳವರೆಗೆೆ ಎ ಶ್ರೇಣಿ ನೀಡಿದೆ. ಮುಂಬರುವ ದಿನಗಳಲ್ಲಿ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಇನ್ನೂ ಹೆಚ್ಚಿನ ಸಾಧನೆ ಮಾಡಲು ಇದೊಂದು ಮೈಲಿಗಲ್ಲಾಗಿದೆ ಎಂದು ಪರಿಶೀಲನಾ ತಂಡದ ಉಸ್ತುವಾರಿ ಮತ್ತು ಸಂಯೋಜಕ ಡಾ.ಪ್ರಮೋದ ಕಟ್ಟಿ ತಿಳಿಸಿದ್ದಾರೆ.
ಕಳೆದ ಸಾಲಿನಲ್ಲಿ ವಿಶ್ವವಿದ್ಯಾಲಯಕ್ಕೆ ಬಿ ಶ್ರೇಣಿ ದೊರೆಕಿತ್ತು. ಪ್ರಸ್ತುತ ಸಾಲಿನಲ್ಲಿ ವಿಶ್ವವಿದ್ಯಾಲಯ ತೋರಿಸಿದ ಉತ್ತಮ ಪ್ರಗತಿಗೆ ಈ ಗೌರವ ಮತ್ತು ಮಾನ್ಯತೆ ದೊರೆಕಿರುವುದು ಸಂತಸ ತಂದಿದೆ. ವಿವಿಯ ಎಲ್ಲ ನಿವೃತ್ತ ಕುಲಪತಿಗಳು, ಪ್ರಸ್ತುತ ಹಾಗೂ ಹಿಂದಿನ ವ್ಯವಸ್ಥಾಪನಾ ಮಂಡಳಿ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿ, ಕಾರ್ಮಿಕರು, ವಿದ್ಯಾರ್ಥಿಗಳು ಮತ್ತು ರೈತರಿಂದ ಈ ಯಶಸ್ಸು ದೊರೆತಿದೆ.|ಡಾ.ಎಂ.ಹನುಮಂತಪ್ಪ ಕುಲಪತಿ, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರು.