ರಾಯಚೂರು ಶಾಖೋತ್ಪನ್ನ ಕೇಂದ್ರದ ಏಳು ಘಟಕಗಳು ಸ್ಥಗಿತ

17012021 RTPS
Published on

ರಾಯಚೂರು: ಬೇಡಿಕೆ ಇಲ್ಲದ ಕಾರಣ ರಾಯಚೂರು ಶಾಖೋತ್ಪನ್ನ ಕೇಂದ್ರದ ಏಳು ಘಟಕಗಳನ್ನು ಸ್ಥಗಿತಗೊಳಿಸಲಾಗಿದೆ. 210 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಏಳು ಘಟಕಗಳ ಉತ್ಪಾದನೆ ನಿಲ್ಲಿಸಲಾಗಿದ್ದು, 250 ಮೆ.ವ್ಯಾ ವಿದ್ಯುತ್ ಉತ್ಪಾದಿಸುವ 8ನೇ ಘಟಕದಿಂದ ಮಾತ್ರ ಉತ್ಪಾದನೆ ಮಾಡಲಾಗುತ್ತಿದೆ.

1720 ಮೆ.ವ್ಯಾ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಹೊಂದಿರುವ ಆರ್‌ಟಿಪಿಎಸ್‌ನಲ್ಲಿ ಘಟಕಗಳ ನಿಲುಗಡೆಯಿಂದ ಗಣನೀಯ ಪ್ರಮಾಣದ ಉತ್ಪಾದನೆ ಇಳಿಕೆ ಕಂಡಿದೆ. ಐದು ದಿನಗಳಲ್ಲಿ ಬೇಡಿಕೆ ಕುಸಿತದಿಂದಾಗಿ ಏಳು ಘಟಕಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಕೆಪಿಸಿ ಮೂಲಗಳು ಖಚಿತಪಡಿಸಿದೆ. ಕಲ್ಲಿದ್ದಲು ಸೇರಿ ಯಾವುದೇ ತಾಂತ್ರಿಕ ಕಾರಣಗಳಿಂದ ಸ್ಥಗಿತಗೊಂಡಿಲ್ಲ. ಬೇಡಿಕೆ ಕುಸಿತದಿಂದ ಮಾತ್ರ ನಿಲುಗಡೆಗೊಳಿಸಲಾಗಿದೆ. ಸೋಲಾರ್, ಪವನ್ ಸೇರಿ ಇತರೆ ಮೂಲಗಳಿಂದಲೂ ವಿದ್ಯುತ್ ಉತ್ಪಾದನೆ ಕುಸಿತವಾಗಿದೆ. ಆರ್‌ಟಿಪಿಎಸ್ ಮತ್ತು ಬಿಟಿಪಿಎಸ್ ಎರಡು ಘಟಕಗಳು ಸಹ ಸ್ಥಗಿತಗೊಂಡಿರುವುದರಿಂದ ಬೇಡಿಕೆ ಮತ್ತು ಪೂರೈಕೆಯಲ್ಲಿ ವ್ಯತ್ಯಾಸವಾಗುವ ಸಾಧ್ಯತೆಗಳಿವೆ.

ಸಂಕಷ್ಟ: ಕರೊನಾ ಹಿನ್ನೆಲೆಯಲ್ಲಿ ಸಿಬ್ಬಂದಿ ಆತಂಕದಲ್ಲಿ ಸಿಲುಕುವಂತಾಗಿದೆ. ಏಳು ಘಟಕಗಳು ಸ್ಥಗಿತಗೊಂಡಿದ್ದರೂ ರೋಟೇಷನ್ ಮೇಲೆ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯುಕ್ತಿಗೊಳಿಸುತ್ತಿರುವುದು ಕಾರ್ಮಿಕರಲ್ಲಿ ಆತಂಕ ಮೂಡಿದೆ. ಈಗಾಗಲೇ ಕರೊನಾ ಸೋಂಕಿಗೆ 12ಕಾರ್ಮಿಕರು ಜೀವ ಕಳೆದುಕೊಂಡಿದ್ದಾರೆ. ಆರ್‌ಟಿಪಿಎಸ್ ಮತ್ತು ವೈಟಿಪಿಎಸ್ ಘಟಕಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಗೆ ಸೋಂಕು ಪತ್ತೆಯಾದಲ್ಲಿ ಸೂಕ್ತ ಚಿಕಿತ್ಸಾ ವ್ಯವಸ್ಥೆ ದೊರೆಯದಂತಾಗಿದೆ ಎಂದು ಆರ್‌ಟಿಪಿಎಸ್ ನೌಕರರ ಸಂಘ ಆರೋಪಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net