ಸರ್ಕಾರದ ನಿರ್ಧಾರ ಟೀಕಿಸಿದ್ದ ಅಧಿಕಾರಿ ಅಮಾನತು; ಮಹೆಬೂಬ್ ಪಾಷಾ ಮೂಲಿಮನಿ ವಿರುದ್ಧ ಕ್ರಮ

29012020 Raichur Meheboob Pasha mulimani
Published on

ರಾಯಚೂರು: ಸರ್ಕಾರದ ನಿರ್ಧಾರ ಟೀಕಿಸಿ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹಾಗೂ ಪಶು ಆಸ್ಪತ್ರೆ ಜಾನುವಾರು ಅಭಿವೃದ್ಧಿ ಅಧಿಕಾರಿ ಮಹೆಬೂಬ್ ಪಾಷಾ ಮೂಲಿಮನಿ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.

ಭಾರತೀಯ ಆಡಳಿತ ಸೇವೆ ಅಧಿಕಾರಿ ವರ್ಗಾವಣೆ ಕುರಿತಂತೆ ಸರ್ಕಾರದ ನಿರ್ಧಾರ ಪ್ರಶ್ನಿಸಿ, ಮೌಲ್ಯಾಧರಿತ ಆಡಳಿತಕ್ಕೆ ಬೆಲೆ ಇಲ್ಲ. ಆಳುವ ಸರ್ಕಾರಗಳ ದಲ್ಲಾಳಿ ಆಡಳಿತಶಾಹಿ ಪಾರಮ್ಯ ಮೇಳೈಕೆಯಲ್ಲಿ ಗುಣಮಟ್ಟ ನಾಗರಿಕ ಸೇವೆ ಮರಿಚಿಕೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು.

ಜತೆಗೆ ಕೆಲವು ದಿನಗಳಿಂದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ಹೋರಾಟದಲ್ಲಿ ಭಾಗವಹಿಸಿದ್ದ ಮಹೆಬೂಬ್ ಪಾಷಾ ಮೂಲಿಮನಿ ನಿರುದ್ಯೋಗಿ, ಜಿಡಿಪಿ ಕುಸಿತ ಸೇರಿ ಹಲವಾರು ವಿಷಯಗಳ ಬಗ್ಗೆ ಸರ್ಕಾರವನ್ನು ಟೀಕಿಸಿದ್ದರು.

ಈ ಕುರಿತಂತೆ ನಗರದ ರಹಮತ್ ಉಲ್ಲಾ ಖಾನ್ ಎಂಬುವವರು ಪಶು ಸಂಗೋಪನಾ ಖಾತೆ ಸಚಿವರಿಗೆ ದಾಖಲೆ ಸಮೇತ ದೂರು ಸಲ್ಲಿಸಿದ್ದರು. ಈ ಕುರಿತಂತೆ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ ಮಂಗಳವಾರದಿಂದ ಜಾರಿಗೆ ಬರುವಂತೆ ಮಹೆಬೂಬ್ ಪಾಷಾ ಮೂಲಿಮನಿಯನ್ನು ಸೇವೆಯಿಂದ ಅಮಾನತುಗೊಳಿಸಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net