ರಾಯಚೂರು ಬಂದ್‌ಗೆ ಉತ್ತಮ ಸ್ಪಂದನೆ; ಕಲಂ 371 (ಜೆ) ವಿರೋಧಿ ನಿಲುವಿಗೆ ಆಕ್ರೋಶ ನವೋದಯ ಸಂಸ್ಥೆ ವಿರುದ್ಧ ಪಕ್ಷಾತೀತ ಹೋರಾಟ

07032022 Raichur bandh
Published on

ರಾಯಚೂರು: ಕಲ್ಯಾಣ ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ನಿಟ್ಟಿನಲ್ಲಿ ಜಾರಿಗೊಳಿಸಲಾಗಿರುವ ಕಲಂ 371 (ಜೆ) ಮೀಸಲಾತಿ ಪ್ರಶ್ನಿಸಿ ಹೈಕೋರ್ಟ್‌ಗೆ ಮೊರೆ ಹೋಗಿರುವ ನವೋದಯ ಶಿಕ್ಷಣ ಸಂಸ್ಥೆ ಕ್ರಮ ಖಂಡಿಸಿ ಸೋಮವಾರ ಪಕ್ಷಾತೀತವಾಗಿ ಕರೆ ನೀಡಲಾಗಿದ್ದ ರಾಯಚೂರು ನಗರ ಬಂದ್‌ಗೆ ಉತ್ತಮ ಸ್ಪಂದನೆ ದೊರೆಯಿತು.

ಪ್ರತಿಭಟನಾಕಾರರು ನಗರದಲ್ಲಿ ಬೈಕ್ ರ‌್ಯಾಲಿ ನಡೆಸುವ ಮೂಲಕ ತೆರೆದಿದ್ದ ಅಂಗಡಿ ಮಾಲೀಕರಿಗೆ ಮನವಿ ಮಾಡಿ ಮುಚ್ಚಿಸಿದರು. ವಾಹನಗಳ ಸಂಚಾರಕ್ಕೆ ಅಡ್ಡಿಯುಂಟಾಗಲಿಲ್ಲ. ಔಷಧ ಅಂಗಡಿ, ಸರ್ಕಾರಿ ಕಚೇರಿ, ಬ್ಯಾಂಕ್‌ಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ರಸ್ತೆ ಬದಿಯ ತಳ್ಳುಬಂಡಿಗಳಲ್ಲಿ ವ್ಯಾಪಾರ ಸಹಜವಾಗಿತ್ತು. ಕೇಂದ್ರ ಬಸ್ ನಿಲ್ದಾಣದಿಂದ ಸಾರಿಗೆ ಸಂಸ್ಥೆಹಳ ಬಸ್ ಸಂಚಾರ ಸ್ಥಗಿತಗೊಂಡಿದ್ದರೂ. ನಗರದ ಹೊರವಲಯದಿಂದ ಬಸ್‌ಗಳು ಸಂಚರಿಸಿದವು. ಬಂದ್ ಮಾಹಿತಿಯಿಲ್ಲದವರು ಬಸ್ ನಿಲ್ದಾಣಕ್ಕೆ ಬಂದು ಹಿಂತಿರುಗಿದರು. ಎಪಿಎಂಸಿಯಲ್ಲಿ ವಹಿವಾಟು ಸ್ಥಗಿತಗೊಂಡಿತ್ತು.

371 (ಜೆ) ಅನುಷ್ಠಾನ ಹೋರಾಟ ಸಮಿತಿ ನೇತೃತ್ವದಲ್ಲಿ ಸೂಪರ್ ಮಾರ್ಕೆಟ್ ಬಳಿ ಧರಣಿ ನಡೆಸಲಾಯಿತು. ವಿಶೇಷ ಸ್ಥಾನಮಾನದಿಂದ ಈ ಭಾಗದ ವಿದ್ಯಾರ್ಥಿಗಳಿಗೆ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ ಸೌಲಭ್ಯ ದೊರೆತಿದೆ. ಭಾಷಾ ಅಲ್ಪ ಸಂಖ್ಯಾತರ ಹೆಸರಿನಲ್ಲಿ ಆರಂಭಗೊಂಡ ನವೋದಯ ಶಿಕ್ಷಣ ಸಂಸ್ಥೆ ಎಂಬಿಬಿಎಸ್ ಪ್ರವೇಶಕ್ಕೆ 371 (ಜೆ) ಮೀಸಲಾತಿ ರದ್ದುಗೊಳಿಸುವಂತೆ ಹೈಕೋಟ್‌ಗೆ ರಿಟ್ ಅರ್ಜಿ ಸಲ್ಲಿಸುವ ಮೂಲಕ ಈ ಭಾಗದ ಜನರಿಗೆ ಅನ್ಯಾಯ ಮಾಡಿದೆ. ಸಂಸ್ಥೆ ಅಧ್ಯಕ್ಷ ಎಸ್.ಆರ್.ರೆಡ್ಡಿ ಸ್ಥಳೀಯ ಸೌಲಭ್ಯಗಳನ್ನು ಪಡೆದು ಇಲ್ಲಿನ ಜನರಿಗೆ ಅನ್ಯಾಯ ಮಾಡುವ ಕೆಲಸ ಮಾಡುತ್ತಿದ್ದಾರೆ. ಈ ಕುರಿತು ಕಾನೂನು ಹೋರಾಟವನ್ನು ನಡೆಸಲಾಗುತ್ತಿದ್ದು, ಸರ್ಕಾರ ಕೂಡಲೇ ಮಧ್ಯ ಪ್ರವೇಶಿಸಿ ನವೋದಯ ಶಿಕ್ಷಣ ಸಂಸ್ಥೆ ವಿರುದ್ಧ ಕಾನೂನು ಕ್ರಮಕೈಗೊಳ್ಳಲು ಮುಂದಾಗಬೇಕು ಎಂದು ವಿವಿಧ ಪಕ್ಷಗಳ ಮುಖಂಡರು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net