ಪ್ರತಿಭಟನೆಗೆ ಸೀಮಿತವಾದ ಮುಷ್ಕರ, ಎಂದಿನಂತೆ ನಡೆದ ವ್ಯಾಪಾರ

261120 Raichur TUCI Protest aganist Central Govt
ಕೇಂದ್ರ ಸರ್ಕಾರ ಜನವಿರೋಧಿ ನೀತಿ ಖಂಡಿಸಿ ರಾಯಚೂರಿನ ಜಿಲ್ಲಾಧಿಕಾರಿ ಕಚೇರಿ ಮುಂದೆ ಟಿಯುಸಿಐನಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.
Published on

ರಾಯಚೂರು: ಕೇಂದ್ರ ಸರ್ಕಾರದ ಜನ ವಿರೋಧಿ ನೀತಿ ಖಂಡಿಸಿ ಕಾರ್ಮಿಕ ಸಂಘಟನೆಗಳು ಗುರುವಾರ ಕರೆ ನೀಡಿದ್ದ ದೇಶವ್ಯಾಪಿ ಮುಷ್ಕರಕ್ಕೆ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ದೊರೆಯಿತು. ಕಾರ್ಮಿಕ ಸಂಘಟನೆಗಳ ಪ್ರತಿಭಟನೆಗೆ ಮಾತ್ರ ಮುಷ್ಕರ ಸೀಮಿತವಾಗಿತ್ತು. ಜಿಲ್ಲಾದ್ಯಂತ ವ್ಯಾಪಾರ, ವಹಿವಾಟು ಎಂದಿನಂತೆ ನಡೆದಿತ್ತು. ಸಾರಿಗೆ ಸಂಸ್ಥೆ ಬಸ್, ಆಟೋ ಸಂಚಾರ ಸರಾಗ ನಡೆದಿತ್ತು. ರಾಜೇಂದ್ರ ಗಂಜ್ ಮತ್ತು ಹತ್ತಿ ಮಾರುಕಟ್ಟೆಯಲ್ಲಿ ವಹಿವಾಟು ಎಂದಿನಂತಿತ್ತು. ಬ್ಯಾಂಕ್‌ಗಳು ಎಂದಿನಂತೆ ಕಾರ್ಯನಿರ್ವಹಿಸಿದವು.

ಅಖಿಲ ಭಾರತ ರೈತ ಸಂಘರ್ಷ ಸಮತಿಯಿಂದ ತಾಲೂಕಿನ ಸಾಥ್‌ಮೈಲ್ ಕ್ರಾಸ್ ಮತ್ತು ಯರಗೇರಾ ಬಳಿಯ ಕರ್ನೂಲ್ ಕ್ರಾಸ್ ಬಳಿ ಕೆಲ ಕಾಲ ಸಂಚಾರ ತಡೆ ನಡೆಸಲಾಯಿತು. ನಗರದ ಅಂಬೇಡ್ಕರ್ ವೃತ್ತದ ಬಳಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯಿಂದ ಧರಣಿ ನಡೆಸಲಾಯಿತು. ಟಿಯುಸಿಐನಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

ಮುಷ್ಕರ ನಿಮಿತ್ತ ಅಂಗನವಾಡಿ, ಬಿಸಿಯೂಟ ನೌಕರರು, ಆಶಾ ಕಾರ್ಯಕರ್ತೆಯರು, ವಿಮಾ, ಬ್ಯಾಂಕ್, ಬಿಎಸ್‌ಎನ್‌ಎಲ್ ನೌಕರರು ಸೇರಿದಂತೆ ಇತರ ಕಾರ್ಮಿಕರು ಕೆಲಸಕ್ಕೆ ಗೈರು ಹಾಜರಾಗುವ ಮೂಲಕ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜನ, ಕಾರ್ಮಿಕ, ರೈತ ವಿರೋಧಿ ಕಾಯ್ದೆ ತಿದ್ದುಪಡಿಗಳನ್ನು ಕೈಬಿಡಬೇಕು ಸೇರಿದಂತೆ ಹಲವು ಬೇಡಿಕೆ ಈಡೇರಿಸುವಂತೆ ತಹಸೀಲ್ಧಾರ್ ಡಾ.ಹಂಪಣ್ಣಗೆ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯಿಂದ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಡಿ.ಎಸ್.ಶರಣಬಸವ, ಎನ್.ಎಸ್.ವೀರೇಶ, ಎಂ.ರವಿ, ವರಲಕ್ಷ್ಮಿ, ಎಚ್.ಪದ್ಮಾ, ಮಹೇಶ ಚೀಕಲಪರ್ವಿ, ಎಂ.ಶರಣೇಗೌಡ, ಕೆ.ಜಿ.ವೀರೇಶ, ಎಸ್.ಮಾರೆಪ್ಪ, ಪ್ರವೀಣರೆಡ್ಡಿ ಗುಂಜಳ್ಳಿ, ಶಿವಕುಮಾರ ಮ್ಯಾಗಳಮನಿ, ಕರಿಯಪ್ಪ ಅಚ್ಚೊಳ್ಳಿ, ಮಾರೆಪ್ಪ ಹರವಿ, ಲಕ್ಷ್ಮಣಗೌಡ ಕಡಗಂದೊಡ್ಡಿ, ಜಿ.ಅಮರೇಶ, ರವಿ ದಾದಾಸ್ ಹಾಗೂ ನೂರಾರು ಕಾರ್ಮಿಕರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net