

ಜನಶಕ್ತಿ ಸಮ್ಮೇಳನದಲ್ಲಿ ಪ್ರಣಾಳಿಕೆ ಮಂಡನೆ
ರಾಯಚೂರು: ಸಂವಿಧಾನವನ್ನು ಉಳಿಸುವುದರೊಂದಿಗೆ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವ ಕೆಲಸ ಮಾಡಬೇಕಾಗಿದೆ. ಸಂವಿಧಾನದಲ್ಲಿನ ಕೆಲವು ಅಂಶ ಮುಂದಿಟ್ಟುಕೊಂಡು ಪಟ್ಟಭದ್ರ ಹಿತಾಸಕ್ತಿಗಳು ಅಧಿಕಾರಕ್ಕೆ ಬರುವುದರನ್ನು ತಡೆಯಬೇಕಾಗಿದೆ ಎಂದು ಬೆಂಗಳೂರಿನ ಜನ ಚಿಂತನ ಕೇಂದ್ರದ ಪ್ರಾಚಾರ್ಯ ಪ್ರೊ.ವಿ.ಎಸ್.ಶ್ರೀಧರ್ ಹೇಳಿದರು.
ಸ್ಥಳೀಯ ಪಂ.ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ನಡೆಯುತ್ತಿರುವ ಕರ್ನಾಟಕ ಜನಶಕ್ತಿ ರಾಜ್ಯ ಸಮ್ಮೇಳನದಲ್ಲಿ ಸೋಮವಾರ ಪ್ರಣಾಳಿಕೆ ಮಂಡನೆ ಗೋಷ್ಠಿಯಲ್ಲಿ ಮಾತನಾಡಿದರು. ದೇಶ ಅವನತಿಯತ್ತ ಸಾಗುತ್ತಿರುವ ಬಗ್ಗೆ ಯೋಚಿಸುವಂತಹ ಸೂಕ್ಷ್ಮ ಮನಸ್ಸಿನ ಜನ ದೊಡ್ಡ ಸಂಖ್ಯೆಯಲ್ಲಿದ್ದು, ಅವರನ್ನು ಒಳಗೊಂಡು ಹೋರಾಟ ರೂಪಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಹಿಂದುತ್ವ, ಮೂಲಭೂತವಾದ, ಮೂಲತತ್ತ್ವ ಹಾಗೂ ಅದರ ಹಿಂದಿರುವ ಸತ್ಯವನ್ನು ಗ್ರಹಿಸುವ ಮೂಲಕ ಪ್ರಣಾಳಿಕೆ ರೂಪಿತವಾಗಬೇಕು. ಬದುಕಲು ಸಾಧ್ಯವಾಗದಂತಹ ಸಂದರ್ಭದಲ್ಲಿ ಹೋರಾಟ ಮಾಡಲು ಸಾಧ್ಯವಿಲ್ಲ. ಮೊದಲು ಬದುಕಲು ಬೇಕಾದ ವಾತಾವರಣ ನಿರ್ಮಾಣ ಮಾಡಬೇಕು ಎಂದು ವಿ.ಎಸ್.ಶ್ರೀಧರ್ ತಿಳಿಸಿದರು.