ಪ್ರಧಾನಿಯಿಂದ ಮಕ್ಕಳ ಉಜ್ವಲ ಭವಿಷ್ಯಕ್ಕೆ ಯೋಜನೆ

Raja Amareshwar Nayak BJP Raichur
ರಾಜಾ ಅಮರೇಶ್ವರ ನಾಯಕ.
Published on

ರಾಯಚೂರು: ದೇಶದ ಎಲ್ಲ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದ್ದಾರೆ. ಮಕ್ಕಳು ದೇಶದ ಸತ್ಪ್ರಜೆಯಾಗಬೇಕು ಎನ್ನುವುದು ಪ್ರಧಾನಿ ಆಶಯವಾಗಿದೆ ಎಂದು ಸಂಸದ ರಾಜಾ ಅಮರೇಶ್ವರ ನಾಯಕ ಹೇಳಿದರು.

ಸ್ಥಳೀಯ ಜಿಪಂ ಸಭಾಂಗಣದಲ್ಲಿ ಪಿಎಂ ಕೇರ್ ಯೋಜನೆಯಡಿ ಅನುಮೋದಿತ ಮಕ್ಕಳಿಗೆ ಸೌಲಭ್ಯ ಒದಗಿಸುವ ಕುರಿತು ವಿಡಿಯೋ ಕಾನ್ಪರೆನ್ಸ್ ಬಳಿಕ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಕರೊನಾದಿಂದ ಪಾಲಕರು ಮೃತಪಟ್ಟು ಅನಾಥರಾದ ಮಕ್ಕಳಿಗೆ 10 ಲಕ್ಷ ರೂ. ಹಾಗೂ ಮಾಸಿಕ 4 ಸಾವಿರ ರೂ. ನೀಡುವ ಯೋಜನೆ ಸ್ವಾಗತಾರ್ಹವಾಗಿದೆ ಎಂದರು.

ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ 18 ವರ್ಷದೊಳಗಿನ ಮಕ್ಕಳಿಗೆ ನಿಗದಿಪಡಿಸಿರುವ ನಿಶ್ಚಿತ ಮೊತ್ತವನ್ನು ಅಂಚೆ ಕಚೇರಿಯಲ್ಲಿ ಠೇವಣಿ ಇರಿಸಲಾಗುವುದು. ಈ ಸಂಬಂಧ ಅನುಮೋದಿತ ಮಕ್ಕಳ ಖಾತೆಯನ್ನು ಅಂಚೆ ಕಚೇರಿಯಲ್ಲಿ ತೆರೆಯಲಾಗಿದೆ. ಮಕ್ಕಳಿಗೆ ಕೌಶಲಾಭಿವೃದ್ಧಿ ತರಬೇತಿ, ಸಮಗ್ರ ಶಿಕ್ಷಣ ನೀಡುವ ಮೂಲಕ ಸರ್ಕಾರ ಮಕ್ಕಳಿಗೆ ನೆರವಿಗೆ ಬರಲಿದೆ. ಫಲಾನುಭವಿಗಳು 23 ವರ್ಷದವರಾದಾಗ ಇಡುಗಂಟಿನ ರೂಪದಲ್ಲಿ 10 ಲಕ್ಷ ರೂಪಾಯಿಯನ್ನು ಭವಿಷ್ಯದ ಉದ್ದೇಶಕ್ಕಾಗಿ ಕಲ್ಪಿಸುವುದರ ಜತೆಗೆ ಉಚಿತ ಆರೋಗ್ಯ ವಿಮಾ ಸೌಲಭ್ಯವನ್ನು ಒದಗಿಸಲಾಗುತ್ತಿದೆ. ಕೇಂದ್ರೀಯ ವಿದ್ಯಾಲಯ ಇಲ್ಲವೇ ಖಾಸಗಿ ಶಾಲೆಗಳಲ್ಲಿ ಪ್ರವೇಶ ನೀಡಲಾಗುತ್ತಿದೆ.

ಕೋವಿಡ್‌ನಿಂದ ತಂದೆ, ತಾಯಿ ಕಳೆದುಕೊಂಡು ದೇವದುರ್ಗ ತಾಲೂಕಿನ ನಾಲ್ಕು ಮಕ್ಕಳಿಗೆ ಯೋಜನೆಯಡಿ ಸಮಗ್ರ ಕಿಟ್ ಒದಗಿಸಲಾಗುತ್ತಿದೆ. ಕೇಂದ್ರ ಸರ್ಕಾರ ಮಕ್ಕಳ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡುತ್ತಿದೆ ಎಂದು ರಾಜಾ ಅಮರೇಶ್ವರ ನಾಯಕ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net