ಪ್ರಜಾಗಾಯಕ ಗದ್ದರ್‌ಗೆ ಶ್ರದ್ಧಾಂಜಲಿ 14ಕ್ಕೆ

AMBANNA AROLI
ಅಂಬಣ್ಣ ಅರೋಲಿ
Published on

ರಾಯಚೂರು: ಇಲ್ಲಿನ ಜಿಲ್ಲಾ ಕ್ರೀಡಾಂಗಣದ ಗಾಂಧೀಜಿ ವೃತ್ತದ ಬಳಿ ನಡೆಯುತ್ತಿರುವ ಏಮ್ಸ್ ಹೋರಾಟ ವೇದಿಕೆಯಲ್ಲಿ ಆ.14ರಂದು ಪ್ರಜಾಗಾಯಕ ಗದ್ದರ್ ನಿಧನಕ್ಕೆ ಶ್ರದ್ಧಾಂಜಲಿ ಸಭೆ ಆಯೋಜಿಸಲಾಗಿದೆ ಎಂದು ಜನಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ಅಂಬಣ್ಣ ಅರೋಲಿ ತಿಳಿಸಿದರು.

ಸ್ಥಳೀಯ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ಕ್ರಾಂತಿಕಾರಿ ಹಾಡಿನ ಮೂಲಕ ವ್ಯವಸ್ಥೆಯ ವಿರುದ್ಧ ಸಿಡಿದೆದ್ದು, ಸಾಂಸ್ಕೃತಿಕ ಬದಲಾವಣೆಗೆ ಕಾರಣವಾಗಿದ್ದ ಗದ್ದರ್ ಸಹಸ್ರಾರು ಯುವಕರಲ್ಲಿ ಉತ್ಸಾಹ ತುಂಬುವ ಪ್ರೇರಣೆಯಾಗಿದ್ದರು ಎಂದರು.

ಇಂಜಿನಿಯರಿಂಗ್ ಅಭ್ಯಾಸ ಮಾಡಿ ಉದ್ಯೋಗ ಬಿಟ್ಟು ಶೋಷಿತ ಸಮುದಾಯಗಳ ಪರ ಧ್ವನಿಯಾಗಿ ಜೀವನ ಸಮರ್ಪಣೆ ಮಾಡಿದ್ದರು. ಗದ್ದರ್‌ರನ್ನು ಕೇವಲ ವ್ಯಕ್ತಿಯಾಗಿ, ಸಂಘಟಕರಾಗಿ, ಸಿದ್ಧಾಂತಕ್ಕೆ ಸೀಮಿತಗೊಳಿಸಲು ಆಗುವುದಿಲ್ಲ. ಎಲ್ಲ ಧರ್ಮಗಳನ್ನು ಸಮೀಕರಣಗೊಳಿಸಿ ಸಮಾನತೆ ಕನಸು ಕಂಡಿದ್ದ ಅವರು, ಜಗತ್ತಿನ ಎಲ್ಲ ಶೋಷಿತ ಸಮುದಾಯಗಳಿಗೆ ಮಾರ್ಗದರ್ಶಕರಾಗಿದ್ದರು ಎಂದರು.

ಐದು ಬಾರಿ ಜಿಲ್ಲೆಗೆ ಆಗಮಿಸಿದ್ದರು. ಅವರ ಒಡನಾಡಿಗಳು, ಅನೇಕ ಪ್ರಗತಿಪರ, ದಲಿತ ಪರ ಸಂಘಟನೆಗಳ ಮುಖಂಡರು, ಸಾಹಿತಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಈಗಾಗಲೇ ಸಿದ್ಧತೆಗಳು ನಡೆಯುತ್ತಿವೆ ಎಂದು ಅಂಬಣ್ಣ ಅರೋಲಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಕೆ.ಪಿ.ಅನೀಲ್‌ಕುಮಾರ, ನರಸಿಂಹಲು, ಅಬ್ರಾಹಂ ಹೊನ್ನಟಗಿ, ಜಯಪ್ಪ, ವೀರೇಶ, ಹನುಮೇಶ ಆರೋಲಿ, ಜನಾರ್ದನ ಹಳ್ಳಿಬೆಂಚಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net