

ರಾಯಚೂರು: ಅಕ್ಕಿ ಚೀಲಗಳನ್ನು ಕಳ್ಳತನ ಮಾಡಿದ ಇಬ್ಬರು ಆರೋಪಿಗಳನ್ನು ರಾಯಚೂರು ತಾಲೂಕಿನ ಯರಗೇರಾ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಜೂ.26, 27 ಹಾಗೂ 28ರಂದು ನಗರದ ಎಂಆರ್‌ಎನ್ ಅಗ್ರೋ ಇಂಡಸ್ಟ್ರೀಸ್, ಪೂರ್ಣ ಸಾಯಿ, ಅನ್ನಪೂರ್ಣ, ಹಾಗೂ ಎಸ್‌ಎಲ್‌ಎನ್ ಅಗ್ರೋ ಇಂಡಸ್ಟ್ರೀಸ್‌ನಿಂದ 1200 ಅಕ್ಕಿ ಚೀಲಗಳನ್ನು ಲೋಡ್ ಮಾಡಿಕೊಂಡು AP 04 TU 0523 ಸಂಖ್ಯೆಯ ಲಾರಿಯಲ್ಲಿ ಮೈಸೂರು ಮತ್ತು ಮಳವಳ್ಳಿಗೆ ಇಳಿಸದೇ ಮೋಸ ಮಾಡಿ ಕಳ್ಳತನಕ್ಕೆ ಮುಂದಾಗಿದ್ದ ಚಾಲಕ ಮತ್ತು ಕ್ಲೀನರ್‍ನನ್ನು ಬಂಧಿಸುವಲ್ಲಿ ಯರಗೇರಾ ಪೊಲೀಸರು ಯಶಸ್ವಿಯಾಗಿದ್ದಾರೆ. ವಿಶೇಷ ತಂಡವನ್ನು ರಚಿಸಿ ಲಾರಿ ಚಾಲಕ ಮಂಜುನಾಥ ಹಾಗೂ ಕ್ಲೀನರ್ ಪರಶುರಾಮ ಎಂಬುವವರನ್ನು ಬಂಧಿಸಿದ್ದಾರೆ.
16.11 ಲಕ್ಷ ಮೌಲ್ಯದ ಅಕ್ಕಿ ಚೀಲಗಳನ್ನು ಹಾಗೂ ಕಳ್ಳತನಕ್ಕೆ ಬಳಸಲಾಗಿದ್ದ ಲಾರಿಯನ್ನು ವಶಪಡಿಸಿಕೊಂಡಿದ್ದಾರೆ. ದಾವಣಗೆರೆ ಮೂಲದ ಲಾರಿ ಮಾಲಿಕ ಪ್ರಶಾಂತ ಎಂಬುವವರು ಲಾರಿ ಚಾಲಕನಿಗೆ ಕರೆ ಮಾಡಿ ಲಾರಿಯನ್ನು ಮೈಸೂರು ಕಡೆಗೆ ಹೋಗದೇ ದಾವಣಗೆರೆಗೆ ಬರಲು ಹೇಳಿದ್ದು, ದಾವಣಗೆರೆಯಲ್ಲಿ ಅಕ್ಕಿ ಮಾರಾಟ ಮಾಡಿ ಬಂದ ಹಣವನ್ನು ಹಂಚಿಕೊಳ್ಳಬೇಕೆಂದು ಪ್ರಯತ್ನಿಸಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪೊಲೀಸರ ಈ ಕಾರ್ಯಚರಣೆಗೆ ಎಸ್.ಪಿ ಪುಟ್ಟಮಾದಯ್ಯ, ಎಎಸ್‌ಪಿ ಶಿವಕುಮಾರ, ಎಎಸ್‌ಪಿ-2 ಹರೀಶ್ ಶ್ಲಾಘಿಸಿದ್ದಾರೆ.