ಯುವಕರು ಅಧ್ಯಯನ ಮಾಡುತ್ತಿಲ್ಲ; ಹಿರಿಯ ಸಾಹಿತಿ ವೀರಹನುಮಾನ ಬೇಸರ

20092020 Raichur Book Release
Published on

ಕವನ ಸಂಕಲನ ಬಿಡುಗಡೆ ಕಾರ್ಯಕ್ರಮ

ರಾಯಚೂರು: ಪ್ರಸ್ತುತ ದಿನಮಾನದಲ್ಲಿ ಯುವ ಕವಿಗಳು ಹೆಚ್ಚು ಸದ್ದು ಮಾಡುತ್ತಿದ್ದು, ಅಧಿಕ ಸಂಖ್ಯೆಯಲ್ಲಿ ಕೃತಿಗಳನ್ನು ಹೊರತರುತ್ತಿದ್ದಾರೆ. ಅದು ಸಂತಸದ ವಿಷಯವಾದರೂ ಬಹಳಷ್ಟು ಜನರಲ್ಲಿ ಅಧ್ಯಯನಶೀಲತೆ ಕೊರತೆ ಎದ್ದು ಕಾಣುತ್ತಿದೆ ಎಂದು ಹಿರಿಯ ಸಾಹಿತಿ ವೀರಹನುಮಾನ ಹೇಳಿದರು.

ಕನ್ನಡ ಭವನದಲ್ಲಿ ಲೋಹಿಯಾ ಪ್ರಕಾಶನ ಮತ್ತು ಮೋಹನ ಪ್ರಕಾಶನ ಭಾನುವಾರ ಏರ್ಪಡಿಸಿದ್ದ ಸಿರವಾರದ ಸುರೇಶ ಹೀರಾ ಅವರ ಬಣ್ಣದ ಪರಪಂಚ ಕವನ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿ, ಇದಕ್ಕೆ ಹಿರಿಯರ ಮಾರ್ಗದರ್ಶನದ ಕೊರತೆಯೂ ಒಂದು ಕಾರಣವಾಗಿದೆ ಎಂದರು.

ಕೃತಿಯ ಮೌಲ್ಯವನ್ನು ಓದುಗರು ನಿರ್ಧಾರ ಮಾಡುತ್ತಿದ್ದು, ಕವಿ ಸಮಾಜಕ್ಕೆ ಮಾರ್ಗದರ್ಶಕನಾಗಬೇಕಾಗಿದೆ. ವಚನಗಳು, ದಾಸದ ಪದಗಳು ಸಮಾಜದಲ್ಲಿ ಕ್ರಾಂತಿಯುಂಟುಮಾಡಿದವರು. ಇದಕ್ಕೆ ಅವುಗಳಲ್ಲಿರುವ ಮೌಲ್ಯಗಳೇ ಕಾರಣ. ಈ ನಿಟ್ಟಿನಲ್ಲಿ ಯುವ ಸಾಹಿತಿಗಳಿಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಾಗಾರ, ಕಮ್ಮಟ ನಡೆಯುವಂತಾಗಬೇಕು ಎಂದರು.

ಕೃತಿ ಕುರಿತು ಮಾತನಾಡಿದ ಪ್ರಾಧ್ಯಾಪಕ ಪ್ರೊ.ಮಹಾದೇವಪ್ಪ, ಸುರೇಶ ಹೀರಾ ಸಾಮಾನ್ಯ ಜನರಿಗೂ ಸರಳವಾಗಿ ಅರ್ಥವಾಗುವಂಥ ಶಬ್ದಗಳನ್ನಿಟ್ಟುಕೊಂಡು ಸಮಾಜದಲ್ಲಿನ ಪ್ರಚಲಿತ ವಿದ್ಯಮಾನಗಳನ್ನು ಆಧಾರವಾಗಿಟ್ಟುಕೊಂಡು ಕವನ ರಚಿಸಿದ್ದಾರೆ. ಸಮಾಜದಲ್ಲಿನ ಅವ್ಯವಸ್ಥೆಯ ಕಂಡು ತಮ್ಮ ನೋವನ್ನು ಕವಿತೆಯ ಮೂಲಕ ಅಭಿವ್ಯಕ್ತಿಗೊಳಿಸಿದ್ದಾರೆ ಎಂದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಧ್ಯಾಪಕ ಡಾ.ದಸ್ತಗೀರಸಾಬ್ ದಿನ್ನಿ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಈರಣ್ಣ ಬೆಂಗಾಲಿ, ಕಸಾಪ ಗೌರವ ಕಾರ್ಯದರ್ಶಿ ಭೀಮನಗೌಡ ಇಟಗಿ, ಕೃತಿ ರಚನೆಕಾರ ಸುರೇಶ ಹೀರಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net