ಪಿಂಚಣಿದಾರರ ಸಂಘಟನೆಯನ್ನು ಬಲಪಡಿಸೋಣ

oplus_2
oplus_2
Published on

ರಾಯಚೂರು: ಕಳೆದ ನಾಲ್ಕೈದು ವರ್ಷಗಳಿಂದ ಪಿಂಚಣಿ ಹೆಚ್ಚಳಕ್ಕಾಗಿ ಹೋರಾಡುತ್ತಿದ್ದು, ಕೇಂದ್ರ ಸರ್ಕಾರ ಪಿಂಚಣಿದಾರರ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಿ ಪಿಂಚಣಿದಾರರ ಪಾಲಿನ ಹಕ್ಕನ್ನು ನೀಡಲು ಮುಂದಾಗಬೇಕಿದೆ ಎಂದು ರಾಷ್ಟ್ರೀಯ ಆಂದೋಲನಾ ಸಮಿತಿ ಎನ್‌ಎಸಿ ರಾಷ್ಟ್ರೀಯ ಸಂಯೋಜಕ ರಮಾಕಾಂತ ನರಗುಂದ ಹೇಳಿದರು.

ನಗರದ ಕನ್ನಡ ಭವನದಲ್ಲಿ ಎಪಿಎಸ್-95 ಭವಿಷ್ಯ ನಿಧಿ ನಿವೃತ್ತ ಪಿಂಚಣಿದಾರರ ಸಮನ್ವಯ ಸಮಿತಿಯಿಂದ ಹಮ್ಮಿಕೊಂಡಿದ್ದ ವಾರ್ಷಿಕ ಸರ್ವಸದಸ್ಯರ ಸಮಾವೇಶವನ್ನು ಉದ್ಘಾಟಿಸಿ ಭಾನುವಾರ ಮಾತನಾಡಿದರು.

ಇಪಿಎಸ್ ಪಿಂಚಣಿದಾರ ಸಂಘಟನೆಯನ್ನು ಬಲಪಡಿಸುವ ಮೂಲಕ ಪಿಂಚಣಿದಾರರ ಸಮಸ್ಯೆಗಳನ್ನು ಕೇಂದ್ರಕ್ಕೆ ಮುಟ್ಟಿಸುವ ಕೆಲಸವಾಗಬೇಕಿದೆ. ಪಿಂಚಣಿದಾರರಿಗೆ ಅನೇಕ ವರ್ಷಗಳಿಂದ ಕಡಿಮೆ ಪಿಂಚಣಿ ಹಣವನ್ನು ನೀಡಲಾಗುತ್ತಿದ್ದು, ಇದರಿಂದ ಬದುಕು ನಡೆಸುವುದು ಕಷ್ಟಕರವಾಗಿದೆ. ಸರ್ಕಾರ ಪಿಂಚಣಿದಾರರ ಪಿಂಚಣಿ ಮೊತ್ತವನ್ನು ಹೆಚ್ಚಳ ಮಾಡಬೇಕಾಗಿದೆ ಎಂದರು.

ಇದೇ ವೇಳೆ ಎನ್‌ಎಸಿ ಪ್ರಧಾನ ಕಾರ್ಯದರ್ಶಿ ಮಂಜುನಾಥ ಸ್ವಾಮಿ ಮಾತನಾಡಿ, ಪಿಂಚಣಿ ಹಣವನ್ನು ಮುಟ್ಟುಗೋಲು ಹಾಕಲಾಗುತ್ತಿದ್ದು, ಕೇಂದ್ರ ಸರ್ಕಾರದ ಈ ನಡೆ ಖಂಡನೀಯವಾಗಿದ್ದು, ಪಿಂಚಣಿ ಒದಗಿಸುವ ಇಚ್ಛೆ ಅಧಿಕಾರಿಗಳಿಗೂ ಇಲ್ಲದಂತಾಗಿದೆ. ಸಂಘಟನೆಯ ಶಕ್ತಿಯಿಂದ ನಮ್ಮ ಹಕ್ಕನ್ನು ನಾವು ಪಡೆಯಬೇಕಾಗಿದೆ ಎಂದರು.

ಈ ಸಂದರ್ಭದಲ್ಲಿ ಎನ್‌ಎಸಿಯ ಕಲಬುರಗಿ ಜಂಟಿ ಕಾರ್ಯದರ್ಶಿ ಸಂಗಪ್ಪ ಬಿರಾದಾರ, ಸಮಿತಿಯ ಜಿಲ್ಲಾ ಗೌರವಾಧ್ಯಕ್ಷ ವೀರಭದ್ರಯ್ಯ ಸ್ವಾಮಿ, ಸಂಚಾಲಕ ವೀರಭದ್ರಪ್ಪ ಅಂಬರಪೇಟೆ, ಪ್ರಮುಖರಾದ ಸಿದ್ದನಗೌಡ, ಬಸವರಾಜ್ ಕಳಸ, ಜಿ.ಮಹಾದೇವಪ್ಪ, ಎಸ್.ಎ ಪೀರಾ, ವೆಂಕಟೇಶ ಬೇವಿನಬೆಂಚಿ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net