ಮನಸ್ಸು ಪರಿವರ್ತನೆ ಮಾಡುವ ಶಕ್ತಿ ಸಂಗೀತಕ್ಕಿದೆ; ಖ್ಯಾತ ಸಂಗೀತ ವಿದ್ವಾನ್ ಡಾ.ನಾಗರಾಜ ಹವಾಲ್ದಾರ್ ಪ್ರತಿಪಾದನೆ

26122021 Raichur book release
Published on

ಪಂ.ನರಸಿಂಹಲು ವಡವಾಟಿ ಅಭಿನಂದನಾ ಗ್ರಂಥ ‘ನಾದ ಸನ್ನಿಧಿ’ ಬಿಡುಗಡೆ

ರಾಯಚೂರು: ಮನಸ್ಸಿನ ಪರಿವರ್ತನೆ ಮಾಡುವ ಮೂಲಕ ಸರಿಯಾದ ದಾರಿಯಲ್ಲಿ ನಡೆಸುವಂತಹ ಶಕ್ತಿ ಸಂಗೀತದಲ್ಲಿದೆ ಖ್ಯಾತ ಸಂಗೀತ ವಿದ್ವಾನ್ ಡಾ.ನಾಗರಾಜ ಹವಾಲ್ದಾರ್ ಹೇಳಿದರು.

ಸ್ಥಳೀಯ ಸ್ವರ ಸಂಗಮ ಸಂಗೀತ ವಿದ್ಯಾ ಸಂಸ್ಥೆಯಲ್ಲಿ ಪಂ.ಸಿದ್ಧರಾಮ ಜಂಬಲದಿನ್ನಿ ಪುಣ್ಯಸ್ಮರಣೆ ನಿಮಿತ್ತ ಶನಿವಾರ ರಾತ್ರಿ ಹಮ್ಮಿಕೊಂಡಿದ್ದ ಸಂಗೀತ ಸಮ್ಮೇಳನ ಹಾಗೂ ಖ್ಯಾತ ಕ್ಲಾರಿಯೋನೆಟ್ ವಾದಕ ಪಂ.ನರಸಿಂಹಲು ವಡವಾಟಿ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.

ಮಾನಸಿಕ ಒತ್ತಡ, ಬದುಕಿನ ಜಂಜಾಟಗಳನ್ನು ಮರೆಯುವಂತೆ ಮಾಡುವ ಮಾಂತ್ರಿಕತೆ ಸಂಗೀತದಲ್ಲಿ ಕಾಣಬಹುದು. ಲೌಕಿಕ ಭಾಷೆ ಸೋತು ನಿಂತಾಗ ಸಂಗೀತ ಮಾತನಾಡುತ್ತದೆ. ದೇಶದ ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರಕ್ಕೆ ಶಾಸ್ತ್ರೀಯ ಸಂಗೀತದ ಕೊಡುಗೆ ಅಪಾರವಾಗಿದೆ. ವಿಶ್ವದಲ್ಲಿ ಕೇವಲ ಪಾಶ್ಚಿಮಾತ್ಯ ಸಂಗೀತ ಪ್ರಕಾರವಿದ್ದರೆ, ಭಾರತದಲ್ಲಿ ಮಾತ್ರ ಎರಡು ಶ್ರೇಷ್ಠ ಶಾಸ್ತ್ರೀಯ ಸಂಗೀತ ಪ್ರಕಾರಗಳಿವೆ ಎಂದರು.

ಡಾ.ನಾಗರಾಜ ಹವಾಲ್ದಾರ್ ಮಾತನಾಡಿ, ಕ್ಲಾರಿಯೋನೆಟ್ ವಾದ್ಯದಲ್ಲಿ ಶಾಸ್ತ್ರೀಯ ಸಂಗೀತವನ್ನು ನುಡಿಸುವುದು ಅಸಾಧ್ಯ. ಆದರೆ, ಅದರಲ್ಲಿ ಶಾಸ್ತ್ರೀಯ ಸಂಗೀತವನ್ನು ಅದ್ಭುತವಾಗಿ ನುಡಿಸಬಹುದು ಎನ್ನುವುದು ತೋರಿಸಿಕೊಟ್ಟ ಮೊದಲಿಗರಲ್ಲಿ ಪಂ.ನರಸಿಂಹಲು ವಡವಾಟಿ ಒಬ್ಬರು ಎಂದರು.

ಅಭಿನಂದನಾ ಗ್ರಂಥ ಬಿಡುಗಡೆ ಮಾಡಿದ ರಾಯಚೂರು ವಿವಿ ಕುಲಪತಿ ಪ್ರೊ.ಹರೀಶ ರಾಮಸ್ವಾಮಿ ಮಾತನಾಡಿ, ರಾಯಚೂರು ಜಿಲ್ಲೆ ಸರಸ್ವತಿಯ ನೆಲೆಯಾಗಿದ್ದು, ಕಲೆ, ಸಾಹಿತ್ಯ, ಸಂಗೀತ ಕ್ಷೇತ್ರದಲ್ಲಿ ಉನ್ನತ ಶಿಖರಕ್ಕೇರಿದವರು ಜಿಲ್ಲೆಯಲ್ಲಿದ್ದಾರೆ. ಆದರೆ, ನಾವು ಹಿಂದುಳಿದವರು ಎನ್ನುವ ಹಣೆಪಟ್ಟಿಯನ್ನು ಹಚ್ಚಿಕೊಂಡಿದ್ದು, ಆ ಕೀಳರಿಮೆಯನ್ನು ಬಿಡಬೇಕಾಗಿದೆ. ಸಂಗೀತದಲ್ಲಿ ಜಾತ್ಯತೀತ ಮೆರಗು ಕಾಣಬಹುದು. ಎಲ್ಲ ಜಾತಿ, ಧರ್ಮದ ಜನ ಸಂಗೀತಕ್ಕೆ ಮಾರು ಹೋಗಿದ್ದಾರೆ. ಹಂಪಿ, ವಿಜಯಪುರ ಜಿಲ್ಲಾ ಉತ್ಸವಗಳು ನಡೆಸುತ್ತಿರುವಂತೆ ರಾಯಚೂರಿನಲ್ಲಿಯೂ ಜಿಲ್ಲಾ ಉತ್ಸವ ನಡೆಸಲು ಮುಂದಾಗಬೇಕಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಡಾ.ಶಿವರಾಜ ಪಾಟೀಲ್ ಮಾತನಾಡಿ, ಜಗತ್ತು ಕಂಡ ಶ್ರೇಷ್ಠ ಸಂಗೀತಕಾರರಲ್ಲಿ ಒಬ್ಬರಾಗಿರುವ ಪಂ.ನರಸಿಂಹಲು ವಡವಾಟಿ ನಮ್ಮ ಜಿಲ್ಲೆಯವರು ಎನ್ನುವುದು ನಮ್ಮ ಹೆಮ್ಮೆಯ ವಿಷಯವಾಗಿದೆ. ನಾವು ಎಲ್ಲ ಕ್ಷೇತ್ರಗಳಲ್ಲಿ ಶ್ರೀಮಂತಿಕೆಯನ್ನು ಹೊಂದಿದ್ದೇವೆ. ಆದರೆ, ನಮ್ಮ ಮನಸ್ಸುಗಳು ಹಿಂದುಳಿದಿವೆ. ಅದನ್ನು ಸರಿಪಡಿಸಬೇಕಾಗಿದೆ ಎಂದರು.

ಸೋಮವಾರಪೇಟೆ ಹಿರೇಮಠದ ಅಭಿನವ ರಾಚೋಟಿವೀರ ಶಿವಾಚಾರ್ಯ ಸ್ವಾಮೀಜಿ, ಗಬ್ಬೂರಿನ ಬೂದಿಬಸವ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಹಿರಿಯ ನ್ಯಾಯವಾದಿ ಪ್ರೊ.ರವಿವರ್ಮ ಕುಮಾರ, ಸಾಹಿತಿ ಡಾ.ಜಯಲಕ್ಷ್ಮಿ ಮಂಗಳಮೂರ್ತಿ, ಖ್ಯಾತ ಕ್ಲಾರಿಯೋನೆಟ್ ವಾದಕ ಪಂ.ನರಸಿಂಹಲು ವಡವಾಟಿ, ಅಭಿನಂದನಾ ಸಮಿತಿ ಗೌರವಾಧ್ಯಕ್ಷ ಕೆ.ಎನ್.ರೆಡ್ಡಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net