ಪಹಣಿಯಲ್ಲಿ ವಕ್ಫ್ ಎಂದು ಬಂದರೆ ಬಿಜೆಪಿಗೆ ತಿಳಿಸಿ: ಶಾಸಕ ಶಿವರಾಜ ಪಾಟೀಲ್ ಹೇಳಿಕೆ

bjp protest raichur
Published on

ರಾಯಚೂರು: ಸರ್ಕಾರದ ನಡೆಯನ್ನು ಗಮನಿಸಿದರೆ ಮುಂದಿನ ದಿನಗಳಲ್ಲಿ ರೈತರಿಗೆ ಜಮೀನುಗಳೇ ಉಳಿಯುವುದಿಲ್ಲ. ರೈತರು ಉಳಿಮೆ ಮಾಡಿಕೊಂಡು ಬಂದ ಜಮೀನುಗಳ ಪಹಣಿಗಳಲ್ಲಿ ವಕ್ಫ್ ಹೆಸರನ್ನು ಸೇರಿಸುವ ಮೂಲಕ ಕಾಂಗ್ರೆಸ್ ಸರ್ಕಾರ ರೈತರನ್ನು ನಿದ್ದೆಗೆಡುವಂತೆ ಮಾಡಿದೆ ಎಂದು ನಗರ ಶಾಸಕ ಹಾಗೂ ಬಜೆಪಿ ಜಿಲ್ಲಾಧ್ಯಕ್ಷ ಡಾ.ಶಿವರಾಜ ಪಾಟೀಲ್ ಹೇಳಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಜಿಲ್ಲಾ ಬಿಜೆಪಿ ಪಕ್ಷದಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಸೋಮವಾರ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದಿಂದ ಸರ್ವಾಧಿಕಾರಿ ಧೋರಣೆಯನ್ನು ಅನುಸರಿಸಲಾಗುತ್ತಿದೆ. ಲಿಖಿತ ಆದೇಶಗಳಿಲ್ಲದೇ ಮೌಖಿಕ ಸೂಚನೆಗಳ ಮೂಲಕ ರೈತರ ಪಹಣಿಗಳಲ್ಲಿ ವಕ್ಫ್ ಆಸ್ತಿಯೆಂದು ನಮೂದಿಸಲಾಗುತ್ತಿರುವುದು ಖಂಡನೀಯವಾದದ್ದು, ರೈತರು ಭಯಪಡದೇ ನಿಮ್ಮ ಪಹಣಿಗಳಲ್ಲಿ ವಕ್ಫ್ ಎಂದು ಎಂದು ಬಂದರೆ ಬಿಜೆಪಿ ಪಕ್ಷಕ್ಕೆ ತಿಳಿಸಿ ನಾವು ನಿಮ್ಮ ಜತೆಗಿದ್ದು ನಿಮಗೆ ನ್ಯಾಯ ಕೊಡಿಸುತ್ತೇವೆ. ಕೇವಲ ಒಂದು ಸಮುದಾಯವನ್ನು ಮನವೋಲಿಸಲು. ಕಾಂಗ್ರೆಸ್ ಸರ್ಕಾರದಿಂದ ರೈತರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಆಕ್ರೋಶ ಹೊರಹಾಕಿದರು.

ಬಿಜೆಪಿ ಪಕ್ಷದಿಂದ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ನಲ್ಲಿ ನ್ಯಾಯವಾದಿಗಳನ್ನು ನೇಮಕ ಮಾಡಲಾಗಿದೆ. ರಾಜ್ಯದಲ್ಲಿ ಯಾವುದೇ ರೈತರ ಪಹಣಿಯಲ್ಲಿ ವಕ್ಫ್ ಮಂಡಳಿಯ ಹೆಸರು ಬಂದರೆ ಕಾನೂನು ಹೋರಾಟ ಮಾಡಲಾಗುವುದು ಎಂದು ತಿಳಿಸಿದರು. ಉಪ ಚುನಾವಣೆ ಹಿನ್ನೆಲೆ ಇನ್ನು ಮುಂದೆ ರೈತರಿಗೆ ವಕ್ಫ್ ನೋಟಿಸ್ ನೀಡುವುದಿಲ್ಲ ಎಂದು ಕಾಂಗ್ರೆಸ್ ಪಕ್ಷದ ನಾಯಕರು ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಉಪ ಚುನಾವಣೆ ನಂತರ ಮತ್ತೆ ತಮ್ಮ ಚಾಳಿಯನ್ನು ಮುಂದುವರೆಸಲಿದ್ದಾರೆ. ರೈತರು ಜಾಗೃತರಾಗಬೇಕು. ರೈತರಿಗೆ ಯಾವುದೇ ಮಾಹಿತಿ ಇಲ್ಲದೇ ಅವರ ಜಮೀನುಗಳನ್ನು ಸರ್ಕಾರ ಕಬಳಿಸುತ್ತಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಎಂಎಲ್ಸಿ ಎನ್.ಶಂಕ್ರಪ್ಪ, ಪಕ್ಷದ ಪ್ರಮುಖರಾದ ಬಸನಗೌಡ ಬ್ಯಾಗವಾಟ, ರಾಘವೇಂದ್ರ ಉಟ್ಕೂರು, ಕರಿಯಪ್ಪ, ಶಂಕರರೆಡ್ಡಿ, ಕಡಗೋಲ ರಾಮಚಂದ್ರ, ವಿನಯಕುಮಾರ ಸಜ್ಜನ, ನಾಗರಾಜ, ಆಂಜನೇಯ್ಯ, ತಿಮ್ಮಪ್ಪ, ಯಲ್ಲಪ್ಪ, ಶರಣಮ್ಮ ಕಾಮರೆಡ್ಡಿ, ಸುಲೋಚನಾ, ಗಿರೀಶ ಕನಕವೀಡು, ಸಂತೋಷ, ಶರಣಪ್ಪಗೌಡ, ನಾಗವೇಣಿ, ಶಿವಲಕ್ಣ್ಮೀ, ಮೌನೇಶ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net