ಒಪೆಕ್ ವೈದ್ಯರು ಕರ್ತವ್ಯದ ವೇಳೆ ಆಸ್ಪತ್ರೆಯಲ್ಲಿಯೇ ಇರಬೇಕು: ವಿಶೇಷಾಧಿಕಾರಿ ರಮೇಶ ಸಾಗರ ಸೂಚನೆ

IMG_20241030_225323
Published on

ರಾಯಚೂರು: ನಗರದ ಒಪೆಕ್ ಆಸ್ಪತ್ರೆ ಬಗ್ಗೆ ಜಿಲ್ಲೆಯ ಜನರಲ್ಲಿ ತಪ್ಪು ಪರಿಕಲ್ಪನೆಯಿದ್ದು, ಅದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಆಸ್ಪತ್ರೆಯ ಕಾರ್ಯಚಟುವಟಿಕೆಗಳನ್ನು ಇನ್ನಷ್ಟು ಉತ್ತಮಗೊಳಿಸಲು ಹೊಸ ಯೋಜನೆಗಳು ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಒಪೆಕ್ ವಿಶೇಷಾಧಿಕಾರಿ ಡಾ.ರಮೇಶ ಸಾಗರ ಹೇಳಿದರು.

ನಗರದ ಒಪೆಕ ಆಸ್ಪತ್ರೆಯ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ಒಪೆಕ್ ಆಸ್ಪತ್ರೆಯ ವಿವಿಧ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸುವ ವೈದ್ಯರು ಕರ್ತವ್ಯದ ವೇಳೆ ತಮ್ಮ ವೈಯಕ್ತಿಕ ಕ್ಲಿನಿಕ್‌ಗಳಿಗೆ ಹೋಗುವಂತಿಲ್ಲ. ಇದರ ಬಗ್ಗೆ ನಿಗಾ ಇಡಲು ಸಮಿತಿಯನ್ನು ರಚಿಸಲು ಚರ್ಚಿಸಲಾಗುವುದು. ಮತ್ತು ಕಡ್ಡಾಯವಾಗಿ ಕರ್ತವ್ಯದ ವೇಳೆ ವೈದ್ಯರು ಆಸ್ಪತ್ರೆಯಲ್ಲಿ ಇರಲೇಬೇಕು ಎಂದರು.

ಸರ್ಕಾರಿ ಆಸ್ಪತ್ರೆಗಳೆಂದರೇ ಜನರು ಭಯಪಡುವ, ಚಿಕಿತ್ಸೆಗೆ ಹಿಂಜರಿಯುವ ಪರಿಸ್ಥಿತಿಯಿದ್ದು, ಇದರಿಂದ ಜನರು ಹೊರ ಬರಲು ಒಪೆಕ್ ಆಸ್ಪತ್ರೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸಿಗುವು ಎಲ್ಲ ಚಿಕಿತ್ಸಾ ಸೌಲಭ್ಯಗಳನ್ನು ನೀಡುವ ಯೋಜನೆಯನ್ನು ರೂಪಿಸಲಾಗುವುದು ಎಂದು ತಿಳಿಸಿದರು.

ಒಪೆಕ್ ಆಸ್ಪತ್ರೆಯ ಬದಲಾವಣೆಗೆ ರೂಪುರೇಷೆಗಳನ್ನು ಸಿದ್ಧಪಡಿಸಲಾಗುತ್ತಿದ್ದು, ಸಂಸ್ಥೆಯ ಬದಲಾವಣೆ ಜತೆಗೆ ಸಾರ್ವಜನಿಕರ ತಪ್ಪು ಅಭಿಪ್ರಾಯಗಳು ಬದಲಾಗಬೇಕಿದೆ. ಆಸ್ಪತ್ರೆಗೆ ಸಿಬ್ಬಂದಿ ಕೊರತೆ ಹೆಚ್ಚಿದೆ. ಆದ್ದರಿಂದ ನೇಮಕಾತಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಹೇಳಿದರು.

ಜನರಿಗೆ ಒಪೆಕ್ ಆಸ್ಪತ್ರೆಯಲ್ಲಿ ಸಿಗುವ ಸೌಲಭ್ಯಗಳ ಕುರಿತು ಜಾಗೃತಿ ಮೂಡಿಸಲು ವೈಜ್ಞಾನಿಕ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ. ಪ್ರಥಮ ಹಂತದಲ್ಲಿ ಬಾಯಿ, ಗಂಟಲು ಕ್ಯಾನ್ಸರ್ ಸ್ಕ್ರೀನಿಂಗ್ ಕಾರ್ಯಕ್ರಮವನ್ನು ನಡೆಸಲಾಗುವುದು ಎಂದರು.

ಹೃದಯ ಸಂಬಂಧೀ ಕಾಯಿಲೆಗೆ ನಾಲು ವೈದ್ಯರಿದ್ದು, ಯುರೋಲಾಜಿಗೆ ಮೂವರು, ಇಬ್ಬರು ಅರವಳಿಕೆ ತಜ್ಞರು, ಮೆಡಿಕಲ್ ಗ್ಯಾಸ್ಟ್ರೋ ವಿಭಾಗದ ಮೂವರು ವೈದ್ಯರು, ನೆಪ್ರೋಲಾಜಿಗೆ ಇಬ್ಬರು, ಪ್ಲಾಸ್ಟಿಕ್ ಸರ್ಜರಿ, ಮಕ್ಕಳ ಶಸ್ತ್ರಚಕಿತ್ಸೆ, ಸರ್ಜಿಕಲ್ ಗ್ಯಾಸ್ಟ್ರೋ, ನ್ಯೂರೋಲಾಜಿ, ಆಂಕಾಲಾಜಿ ಶಸ್ತ್ರಚಿಕಿತ್ಸೆ, ಫೆಸಿಯೋ ಮ್ಯಾಕ್ಸಲರಿ ಸರ್ಜರಿ ಹಾಗೂ ಸೆಂಟ್ರಲ್ ಲ್ಯಾಬ್‌ಗೆ ತಲಾ ಒಬ್ಬರು ವೈದ್ಯರಿದ್ದಾರೆ ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿ ಯಾವುದೇ ರೋಗಿಯನ್ನು ಒಪೆಕ್ ಆಸ್ಪತ್ರೆಯಿಂದ ಬೇರೆ ಆಸ್ಪತ್ರೆಗಳಿಗೆ ಶಿಫಾರಸ್ಸು ಮಾಡದೇ ಆಸ್ಪತ್ರೆಯಲ್ಲಿಯೇ ಎಲ್ಲ ಚಿಕಿತ್ಸೆಗಳನ್ನು ನೀಡಲು ಕ್ರಮ ಕೈಗೊಳ್ಳುವ ಬಗ್ಗೆ ಜಿಲ್ಲಾಡಳಿತ ಮತ್ತು ಇತರೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net