ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದ ಜನ, ಜನರ ನಿಯಂತ್ರಿಸಲು ಕರಸತ್ತು

23052021 Raichur Market rush
Published on

ಮಾರಾಟಗಾರರಿಂದ ಕೃತಕ ಅಭಾವ ಸೃಷ್ಟಿ

ರಾಯಚೂರು: ಮೂರು ದಿನಗಳಿಗೊಮ್ಮೆ ಅಗತ್ಯ ವಸ್ತುಗಳ ಖರೀದಿಗೆ ಜಿಲ್ಲಾಡಳಿತ ಅವಕಾಶ ನೀಡಿದ್ದರಿಂದ ನಗರದ ವಿವಿಧೆಡೆ ದಿನಸಿ, ತರಕಾರಿ ಖರೀದಿಗೆ ಜನ ಭಾನುವಾರ ಮಾರುಕಟ್ಟೆಗೆ ಧಾವಿಸಿದ್ದು, ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿರುವುದು ಕಂಡು ಬಂತು.

ಬೆಳಗ್ಗೆ 6 ರಿಂದ ಮಧ್ಯಾಹ್ನ 6ರವರೆಗೆ ತಮ್ಮ ತಮ್ಮ ಬಡಾವಣೆಗಳಲ್ಲೇ ಖರೀದಿಗೆ ಅವಕಾಶ ನೀಡಿದ್ದರೂ ಜನರು ಹೆಚ್ಚಿನ ಸಂಖ್ಯೆಯಲ್ಲಿ ಮಾರುಕಟ್ಟೆಗೆ ಧಾವಿಸಿದ್ದರು. ನಗರಸಭೆಯಿಂದ ವಾರ್ಡ್‌ವಾರು ತರಕಾರಿ ಮಾರಾಟಕ್ಕೆ ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದರೂ ನಿಗದಿತ ಸ್ಥಳಗಳಲ್ಲಿ ಮಾರಾಟ ನಡೆಯಲಿಲ್ಲ. ನಿಗದಿತ ಸ್ಥಳದಲ್ಲಿ ಐದಕ್ಕಿಂತ ಹೆಚ್ಚಿನ ಜನ ತರಕಾರಿ ಮಾರಾಟ ಮಾಡಬಾರದು ಎಂದು ಆದೇಶ ಹೊರಡಿಸಲಾಗಿದ್ದರೂ ಬಹುತೇಕ ಸ್ಥಳಗಳಲ್ಲಿ ಹೆಚ್ಚಿನ ವ್ಯಾಪಾರಸ್ಥರು ವಹಿವಾಟು ನಡೆಸಿದರು. ಇದರಿಂದ ಜನ ಗುಂಪುಗೂಡಿದ್ದರು.

ಹಲವೆಡೆ ಬೆಳಗ್ಗೆ 10ಗಂಟೆಯೊಳಗೆ ತರಕಾರಿ ದೊರೆಯದಂತಾಗಿದ್ದು, ಕೃತಕ ಅಭಾವ ಸೃಷ್ಟಿಸಿ ಅಧಿಕ ಬೆಲೆಗೆ ಮಾರಾಟ ಮಾಡುತ್ತಿರುವ ದೂರು ಜನರಿಂದ ವ್ಯಕ್ತವಾಯಿತು. ಕಿರಾಣಿ ಅಂಗಡಿಗಳ ಮುಂದೆಯೂ ಜನ ಹೆಚ್ಚಿನ ಸಂಖ್ಯೆಯಲ್ಲಿ ಸೇರಿರುವುದು ಕಂಡು ಬಂತು.

ಈ ಹಿಂದೆ ಬೆಳಗ್ಗೆ 6 ರಿಂದ 10 ಗಂಟೆವರೆಗೆ ಮಾತ್ರ ಖರೀದಿಗೆ ಅವಕಾಶ ನೀಡಿದ್ದರಿಂದ ಜನ ಜನಜಂಗುಳಿ ಹೆಚ್ಚಾಗಿತ್ತು. ಆದ್ದರಿಂದ, ಈ ಬಾರಿ ಈ ಅವಧಿಯನ್ನು ಮಧ್ಯಾಹ್ನ 2ರವರೆಗೆ ವಿಸ್ತರಣೆ ಮಾಡಲಾಗಿದೆ. ಆದರೂ ಜನಸಂದಣಿ ಉಂಟಾಯಿತು. ಕಳೆದ ಬಾರಿಯಷ್ಟು ಜನಸಂದಣಿ ಇರಲಿಲ್ಲ ಎಂಬುದು ತುಸು ಸಮಾಧಾನ ತಂದಿದೆ.

ಮೂರು ದಿನ ಸಂಪೂರ್ಣ ಲಾಕ್‌ಡೌನ್
ಜನರಿಗೆ ಅಗತ್ಯ ವಸ್ತುಗಳ ಖರೀದಿಗೆ ಭಾನುವಾರ ಬೆಳಗ್ಗೆ 6 ರಿಂದ ಮಧ್ಯಾಹ್ನ 2ರವರೆಗೆ ಅವಕಾಶ ನೀಡಿದ್ದ ಜಿಲ್ಲಾಡಳಿತ ಪುನಃ ಸೋಮವಾರದಿಂದ ಮೇ 26ರ ಮಧ್ಯರಾತ್ರಿ 12ರವರೆಗೆ ಸಂಪೂರ್ಣ ಲಾಕ್‌ಡೌನ್ ಘೋಷಣೆ ಮಾಡಿದೆ. ಈ ಸಂದರ್ಭ ಆಸ್ಪತ್ರೆ, ಔಷಧ ಅಂಗಡಿ, ಹಾಲು, ಪೆಟ್ರೋಲ್ ಬಂಕ್ ಹಾಗೂ ತುರ್ತು ವೈದ್ಯಕೀಯ ಸೇವೆ ಹೊರತುಪಡಿಸಿ ಇತರ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ. ಸರಕು ಸಾಗಣೆ ವಾಹನ ಹೊರತು ಪಡಿಸಿ ಸಾರ್ವಜನಿಕರ ಓಡಾಟಕ್ಕೆ ನಿರ್ಬಂಧ ಹೇರಲಾಗಿದೆ. ಬ್ಯಾಂಕ್‌ಗಳು ಬೆಳಗ್ಗೆ 6 ರಿಂದ 10ರವರೆಗೆ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ. ವಾರದ ನಂತರ ಮದ್ಯ ಮಾರಾಟಕ್ಕೆ ಅವಕಾಶ ನೀಡಿದ್ದರಿಂದ ಭಾನುವಾರ ಮದ್ಯದ ಅಂಗಡಿಗಳ ಮುಂದೆ ಸರತಿ ಸಾಲು ಕಂಡು ಬಂತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net