ಓಬವ್ವರ ಸಾಹಸ ಎಲ್ಲರಿಗೂ ಮಾದರಿ: ಡಿಸಿ ಕೆ.ನಿತೀಶ

oplus_2
oplus_2
Published on

ರಾಯಚೂರು: ವಿದ್ಯಾರ್ಥಿಗಳು ಒನಕೆ ಓಬವ್ವ ಅವರ ತತ್ವಾದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಉತ್ತಮ ವಿದ್ಯಾಭ್ಯಾಸವನ್ನು ಮಾಡುವ ಮೂಲಕ ಯಶಸ್ಸನ್ನು ಸಾಧಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ನಿತೀಶ ಹೇಳಿದರು.

ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ಜಿಲ್ಲಾ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಹಮ್ಮಿಕೊಂಡಿದ್ದ ಒನಕೆ ಓಬವ್ವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಸೋಮವಾರ ಮಾತನಾಡಿದರು.

ವೀರವನಿತೆ ಓಬವ್ವರ ದೇಶ ಭಕ್ತಿ, ಸಾಹಸಗಳು ಎಲ್ಲರಿಗೂ ಮಾದರಿಯಾಗಿವೆ. ಚಿತ್ರದುರ್ಗ ಕೋಟೆಯನ್ನು ಸುತ್ತಿದಾಗಲೇ ಅಲ್ಲಿನ ಇತಿಹಾಸ ಅರ್ಥವಾಗುತ್ತದೆ. ಶಾಲಾ ಮಕ್ಕಳಿಗೆ ಆದಷ್ಟು ಶೀಘ್ರದಲ್ಲಿಯೇ ಜಿಲ್ಲಾಡಳಿತದಿಂದ ಚಿತ್ರದುರ್ಗ ಪ್ರವಾಸ ಹಮ್ಮಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.

ಪ್ರಸ್ತುತ ವಿದ್ಯಾರ್ಥಿನಿಯರು ಓಬವ್ವ ಅವರ ತತ್ವಾದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಸಮಾಜದಲ್ಲಿ ಸಾಕಷ್ಟು ಅವಕಾಶಗಳಿದ್ದು, ಇತರೆ ಜಿಲ್ಲೆಗಳಲ್ಲಿ ವಿದ್ಯಾರ್ಥಿನಿಯರು ಉನ್ನತ ಸ್ಥಾನಕ್ಕೆ ತಲುಪುತ್ತಿದ್ದಾರೆ ಜಿಲ್ಲೆಯ ವಿದ್ಯಾರ್ಥಿನಿಯರು ಕೂಡ ಮುಂದೆ ಬರಬೇಕು ಎಂದು ಕರೆ ನೀಡಿದರು.

ಜಾತಿ, ಧರ್ಮ, ಭಾಷೆ ನೊಡದೇ, ದೇಶಕ್ಕಾಗಿ ಹೋರಾಡಿದ ಮಹಾತ್ಮರನ್ನು ಸ್ಮರಿಸಿಕೊಳ್ಳಬೇಕು. ಕರ್ನಾಟಕ ಮಾತ್ರವಲ್ಲದೇ ಇಡೀ ದೇಶಕ್ಕೆ ಓಬವ್ವ ಮಾದರಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಒನಕೆ ಓಬವ್ವ ಅಧ್ಯಯನ ಪೀಠ ಮತ್ತು ಸ್ಮಾರಕ ನಿರ್ಮಾಣದ ವಿಚಾರವನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.

ಇದೇ ವೇಳೆ ಸರ್ಕಾರಿ ಪ್ರಥಮ ಧರ್ಜೆ ಕಾಲೇಜು ಉಪನ್ಯಾಸಕಿ ಮಹಾದೇವಿ ಮಾತನಾಡಿ, ಚಾರಿತ್ರೃಕ್ಕೆ ಹರಸರಾಗಿರುವ ಕರ್ನಾಟಕದಲ್ಲಿ ಒನಕೆ ಓಬವ್ವ ಜಯಂತಿ ಆಚರಣೆ ಮಾಡಲು ಸರ್ಕಾರ ಆದೇಶ ಹೊರಡಿಸಿರುವುದು ಸಂತಸದ ವಿಚಾರವಾಗಿದೆ. ಪ್ರಸ್ತುತ ದಿನಗಳಲ್ಲಿ ಮಹನೀಯರ ಚರಿತ್ರೆಗಳು ಮರೆತು ಹೋಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ನರಸಮ್ಮ ಮಾಡಗಿರಿ, ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ಶಶಿಕಾಂತ ಶಿವಪುರೆ, ಎಎಸ್ಪಿ ಶಿವಕುಮಾರ, ತಹಸೀಲ್ದಾರ್ ಸುರೇಶ ವರ್ಮಾ, ಡಿಎಚ್‌ಒ ಡಾ.ಸುರೇಂದ್ರಬಾಬು, ಸಮಾಜದ ಪ್ರಮುಖರಾದ ಮಲ್ಲೇಶ ಕೊಲಮಿ, ಕೆ.ಇ ಕುಮಾರ, ಎಂ.ವಸಂತ, ವಿಶ್ವನಾಥ ಪಟ್ಟಿ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net