8ರಂದು ವೀರಶೈವ ಮಹಾಸಭಾದಿಂದ ಪ್ರತಿಭಾ ಪುರಸ್ಕಾರ

Chandrashekhar Mirjiapur
ಚಂದ್ರಶೇಖರ ಪಾಟೀಲ್ ಮಿರ್ಜಾಪುರ.
Published on

ರಾಯಚೂರು: ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಜ.8ರಂದು ಬೆಳಗ್ಗೆ 10.30ಕ್ಕೆ ಎಸ್ಸೆಸ್ಸೆಲ್ಸಿ ಮತ್ತು ಪಿಯು ದ್ವಿತೀಯ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳೊಂದಿಗೆ ತೇರ್ಗಡೆ ಹೊಂದಿದ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಚಂದ್ರಶೇಖರ ಪಾಟೀಲ್ ಮಿರ್ಜಾಪುರ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದರು. ವಿದ್ಯಾರ್ಥಿಗಳಿಗೆ ತಲಾ 2 ಸಾವಿರ ರೂ. ಹಾಗೂ ಸ್ಮರಣಿಕೆ ನೀಡಲಾಗುವುದು. ಎಸ್ಸೆಸ್ಸೆಲ್ಸಿಯ 95 ಹಾಗೂ ಪಿಯುಸಿ ಉತ್ತೀರ್ಣರಾದ 53 ವಿದ್ಯಾರ್ಥಿಗಳು ನೋಂದಣಿ ಮಾಡಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳು ನೇರವಾಗಿ ಕಾರ್ಯಕ್ರಮಕ್ಕೆ ಆಗಮಿಸಿ ನೋಂದಣಿ ಮಾಡಿಸಿಕೊಳ್ಳಬಹುದಾಗಿದೆ ಎಂದರು.

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕಗಳನ್ನು ಪಡೆದ ಶಾಸಕ ಡಾ.ಶಿವರಾಜ ಪಾಟೀಲ್ ಪುತ್ರಿ ಸಾಕ್ಷಿ ಪಾಟೀಲರನ್ನು ಸನ್ಮಾನಿಸಲಾಗುವುದು. ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಲು ಅನೇಕ ದಾನಿಗಳು ಮಹಾಸಭಾ ಜತೆ ಕೈಜೋಡಿಸಿದ್ದಾರೆ. ಮಹಾಸಭಾ ಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆ ಕಾರ್ಯಕ್ರಮ ಉದ್ಘಾಟಿಸಲಿದ್ದು, ಕಿಲ್ಲೆ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ, ಸೋಮವಾರ ಪೇಟೆ ಹಿರೇಮಠದ ಅಭಿನವ ರಾಚೋಟಿವೀರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ ಎಂದು ಚಂದ್ರಶೇಖರ ಪಾಟೀಲ್ ತಿಳಿಸಿದರು. ಪದಾಧಿಕಾರಿಗಳಾದ ಎಂ.ಭೀಮರೆಡ್ಡಿ, ಮಲ್ಲಿಕಾರ್ಜುನ ದೋತರಬಂಡಿ, ಸುಲೋಚನಾ ಆಲ್ಕೂರು, ವಿಜಯರಾಜೇಶ್ವರಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net