

ರಾಯಚೂರು: ನಗರದ ಅನೇಕ ಕಡೆಗಳಲ್ಲಿ ಸರ್ಕಾರಿ ಭೂಮಿಗಳನ್ನು ಅತಿಕ್ರಮಣ ಮಾಡಿಕೊಂಡ ಬಗ್ಗೆ ನಗರಸಭೆ ಅಧಿಕಾರಿಗಳ ಗಮನಕ್ಕಿದ್ದರೂ ಒತ್ತುವರಿ ತೆರವಿಗೆ ನಗರಸಭೆ ಅಧಿಕಾರಿಗಳು ಕಡಿವಾಣ ಹಾಕದೇ ನಿರ್ಲಕ್ಷೃವಹಿಸುತ್ತಿದೆ.
ಆಯ್ದ ಕೆಲವು ಒತ್ತುವರಿ ಕಟ್ಟಡಗಳ ಬಗ್ಗೆ ಮಾತ್ರ ನಗರಸಭೆ ಅಧಿಕಾರಿಗಳು ಗಮನಹರಿಸುತ್ತಿದ್ದು, ನಗರದ ಅನೇಕ ಕಡೆಗಳಲ್ಲಿ ಸರ್ಕಾರಿ ಭೂಮಿಗಳನ್ನು ಕಬಳಿಸುವ ಬಗ್ಗೆ ಗಮನಕ್ಕಿದ್ದರೂ ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ.
ನಗರದ ರಾಯಚೂರು ಕೋಟೆ, ಕೋಟೆ ಸುತ್ತಲಿನ ರಾಜಕಾಲುವೆ ಕಂದಕಗಳು, ಮಾವಿನ ಕೆರೆ ಸೇರಿ ಅನೇಕ ಕಡೆಗಳಲ್ಲಿ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ. ಕೆಲವೆಡೆ ಅತಿಕ್ರಮಿಸಿದ ಜಾಗದಲ್ಲಿ ಅಕ್ರಮವಾಗಿ ಕಟ್ಟಡಗಳನ್ನು ಕಟ್ಟಿಕೊಳ್ಳಲಾಗಿದ್ದು, ಈ ಬಗ್ಗೆ ಗಮನಕ್ಕೆ ಬಂದಾಗ ಮಾತ್ರ ಸಿಎಂಸಿ ಅಧಿಕಾರಿಗಳು ಪೊಲೀಸ್ ಬಂದೋಬಸ್ತ್‌ನೊಂದಿಗೆ ತೆರವು ಕಾರ್ಯ ಪೂರ್ಣಗೊಳಿಸದೇ ವಾಪಸ್ ಮರಳಿದ ಉದಾಹರಣೆಗಳು ಇವೆ.
ರಾಯಚೂರು ನಗರದ ಸ್ಟೇಷನ್ ರಸ್ತೆಯ ಪಶ್ಚಿಮ ಪೊಲೀಸ್ ಠಾಣೆಯ ಹತ್ತಿರವಿರುವ ಕಟ್ಟಡವು ನಗರಾಭಿವೃದ್ಧಿ ಪ್ರಾಧಿಕಾರದಿಂದ ಮಂಜೂರಾದ ನಕಾಶೆಯ ಹಾಗೂ ಕಟ್ಟಡ ಪರವಾನಿಗೆ ಆದೇಶದಲ್ಲಿರುವ ಷರತ್ತುಗಳಿಗೆ ವಿರುದ್ಧವಾಗಿ ಕಟ್ಟಡ ನಿರ್ಮಾಣ ಮಾಡುತ್ತಿರುವ ಬಗ್ಗೆ ಪರಿಶೀಲಿಸಿ ಶನಿವಾರ ಬೆಳಿಗ್ಗೆ 7 ಗಂಟೆಗೆ ಕಟ್ಟಡ ಒಡೆಯಲು ಮುಂದಾಗಿದೆ.
ಕಟ್ಟಡ ಪರವಾನಿಗೆಯಲ್ಲಿ 51.55 ಚ.ಮೀಗಳಿಗೆ ಅನುಮೋದನೆ ನೀಡಲಾಗಿದ್ದು, ಆದರೆ 70.68 ಚ.ಮೀ ನಲ್ಲಿ ಕಟ್ಟಡ ನಿರ್ಮಾಣ ಮಾಡುತ್ತಿರುವ ಬಗ್ಗೆ ಸ್ಥಳ ಪರಿಶೀಲನೆ ಮಾಡಿ ವರದಿ ಸಿದ್ದಪಡಿಸಿ ನೋಟೀಸ್ ನೀಡಲಾಗಿತ್ತು.
ಕಟ್ಟಡ ತೆರವಿಗೆ ಸೂಚಿಸಲಾಗಿದ್ದರೂ ಕೂಡ ಕಟ್ಟಡ ತೆರವುಗೊಳಿಸಲಾಗಿರಲಿಲ್ಲ. ನಗರಸಭೆಯಿಂದ ಪೊಲೀಸ್ ಬಂದೋಬಸ್ ನೊಂದಿಗೆ ಜೆಸಿಬಿಯಿಂದ ಕಟ್ಟಡ ತೆರವುಗೊಳಿಸುವ ಕಾರ್ಯಕ್ಕೆ ಮುಂದಾಗಿದೆ. ಜನಸಂದಣಿ ಪ್ರದೇಶವಾಗಿರುವ ಕಾರಣ ಹಂತ ಹಂತವಾಗಿ ಕಟ್ಟಡವನ್ನು ತೆರವುಕೊಳಿಸುವ ಕಾರ್ಯ ಕೈಗೊಳ್ಳಲಾಗಿದೆ. ಮುಂದೆ ಈ ಕಟ್ಟಡ ಹಾಗೂ ಇತರೆ ಅಕ್ರಮ ಕಟ್ಟಡಗಳ ತೆರವು ಕಾರ್ಯ ಪೂರ್ಣಗೊಳಿಸುವರೇ ಎಂದು ಕಾದುನೋಡಬೇಕಾಗಿದೆ.
ಅಕ್ರಮ ಕಟ್ಟಡಗಳ ಬಗ್ಗೆ ದೂರುಗಳು ಬಂದಾಗ ಮತ್ತು ಖಾಸಗಿ ವ್ಯಕ್ತಿಗಳು ಗಮನಕ್ಕೆ ತಂದಾಗ ಮಾತ್ರ ನಗರಸಭೆ ತೆರವಿಗೆ ಮುಂದಾಗುತ್ತದೆ ಉಳಿದ ಸಮಯದಲ್ಲಿ ನಗರದಲ್ಲಿ ಎಲ್ಲೆಲ್ಲಿ ಅಕ್ರಮ ಕಟ್ಟಡಗಳು ನಿರ್ಮಾಣವಾಗುತ್ತಿವೆ ಎಂಬುವುದರ ಬಗ್ಗೆ ಗಮನಹರಿಸುವುದಿಲ್ಲ ಎಂಬುವ ಆರೋಪ ನಗರಸಭೆ ಮೇಲಿದೆ. ನಗರದ ಇತರೆ ಪ್ರದೇಶಗಳಲ್ಲಿ ಸರ್ಕಾರಿ ಜಾಗವನ್ನು ಅತಿಕ್ರಮಿಸಿ ಕಟ್ಟಡ ಕಟ್ಟಿಕೊಂಡಿರುವುದರ ಬಗ್ಗೆ ಗಮನ ಹರಿಸಬೇಕೆಂಬುದು ಹಲವರ ಅಭಿಪ್ರಾಯವಾಗಿದೆ.
ರಾಯಚೂರಿನ ಮಾವಿನ ಕೆರೆ ಸುತ್ತಲೂ ಕಟ್ಟಡ ತ್ಯಾಜ್ಯವನ್ನು ಸುರಿಯುವ ಮೂಲಕ ಕೆರೆ ಜಾಗವನ್ನು ಒತ್ತುವರಿ ಮಾಡಿಕೊಳ್ಳುತ್ತಿರುವ ಬಗ್ಗೆ ನಗರಸಭೆ ಹಾಗೂ ಡಿಸಿ ಕಚೇರಿಗೆ ಹಲವು ದೂರುಗಳು ಬಂದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಿಲ್ಲ. ಕರೆಯ ಸುತ್ತಲೂ ಕಟ್ಟಡಗಳನ್ನು ನಿರ್ಮಿಸಿಕೊಳ್ಳಲಾಗಿದ್ದು, ಅನೇಕ ಬಾರಿ ನಗರಸಭೆಯಿಂದ ಕಟ್ಟಡ ತೆರವು ಕಾರ್ಯ ಕೈಗೊಂಡು ಅರ್ಧಕ್ಕೆ ವಾಪಸ್ಸಾಗಿರುವ ಉದಾಹರಣೆಗಳು ಇವೆ.