ಅಲೆಮಾರಿ ಜನಾಂಗಕ್ಕೆ ಒಳಮೀಸಲಾತಿ ಪ್ರಮಾಣ ಹೆಚ್ಚಿಸಿ

IMG_20241209_142715
Published on

ರಾಯಚೂರು: ಅಲೆಮಾರಿ ಸಮುದಾಯಗಳ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಡಿ.13ರಂದು ಬೆಳಗಾವಿ ಸುವರ್ಣಸೌಧ ಚಲೋ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಲೆಮಾರಿ ಬೇಡ ಬುಡ್ಗ ಜಂಗಮ ಕೇಮಾಭಿವೃದ್ಧಿ ಸಂಘದ ರಾಜ್ಯ ಸಂಚಾಲಕ ಮಹಾಂತೇಶ ಸಂಕಲ್ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ಶಿಕ್ಷಣ ಹಾಗೂ ಸರ್ಕಾರಿ ಸೇವೆಗಳನ್ನು ಪಡೆಯುವಲ್ಲಿ ಹಿಂದುಳಿದ ಅಲೆಮಾರಿ ಜನಾಂಗಕ್ಕೆ ಈಗಿರುವ ಶೇ.1ರಷ್ಟು ಮೀಸಲಾತಿಯನ್ನು ಸೂಕ್ತ ಪ್ರಾತಿನಿಧ್ಯದೊಂದಿಗೆ ಶೇ.3ರಷ್ಟು ಒಳಮೀಸಲಾತಿಯಡಿ ಮೀಸಲಾತಿ ಕಲ್ಪಿಸಿಕೊಡಬೇಕು ಎಂದರು.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳನ್ನು ಒಳಗೊಂಡಂತೆ ಸೂಕ್ಷ್ಮ, ಅತಿಸೂಕ್ಷ್ಮ ಅಲೆಮಾರಿ ಸಮುದಾಯಗಳ ಅಭಿವೃದ್ಧಿಗೆ ಆಯೋಗ ರಚನೆಯಾಗಬೇಕು. ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಲೆಮಾರಿಗಳಿಗಾಗಿ ಮನೆಗಳ ನಿರ್ಮಾಣಕ್ಕಾಗಿ ಹೆುಚ್ಚುವರಿ ಅನುದಾನವನ್ನು ನೀಡಿ ನಂತರ ಏಕಾಏಕಿ ವಾಪಸ್ ಪಡೆದಿದ್ದು, ಅಲೆಮಾರಿಗಳಿಗೆ ವಸತಿ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ವಾಪಸ್ ಪಡೆದಿದ್ದ 300 ಕೋಟಿ ರೂ.ಗಳ ಅನುದಾನವನ್ನು ಮರುಬಿಡುಗಡೆ ಮಾಡಬೇಕು ಎಂದು ಹೇಳಿದರು.

ರಾಜ್ಯದ ಹಂಪಿ ಕನ್ನಡ ವಿವಿಯಲ್ಲಿ ಅಲೆಮಾರಿ ಬುಡಕಟ್ಟು ಅಧ್ಯಯನ ಕೇಂದ್ರವನ್ನು ಸ್ಥಾಪಿಸಬೇಕು. ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಸೂಕ್ಷ್ಮ, ಅತಿಸೂಕ್ಷ್ಮ ಅಲೆಮಾರಿ ಸಮುದಾಯದ ಒಬ್ಬ ವ್ಯಕ್ತಿಯನ್ನು ಆಯ್ಕೆ ಮಾಡಬೇಕು. ಶೀಘ್ರವೇ ಒಳಮೀಸಲಾತಿಯನ್ನು ಜಾರಿ ಮಾಡಲು ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಶಿವರಾಜ ರುದ್ರಾಕ್ಷಿ, ಶ್ರೀನಿವಾಸ, ಹುಸೇನಪ್ಪ ಯಡವಲ್ಲಿ, ಎಸ್.ಆರ್.ಶ್ರೀನಿವಾಸ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net