

ರಾಯಚೂರು: ಪ್ರಸ್ತುತ ಶೈಕ್ಷಣಿಕ ವರ್ಷದಿಂದ ಅನುಷ್ಠಾನಗೊಳಿಸಲಾಗುತ್ತಿರುವ ನೂತನ ಶಿಕ್ಷಣಯನ್ನು ಕೈಬಿಡಬೇಕು ಎಂದು ಒತ್ತಾಯಿಸಿ ಸ್ಥಳೀಯ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನೈಜೇಷನ್ ಗುರುವಾರ ಪ್ರತಿಭಟನೆ ನಡೆಸಿತು.
ನಂತರ ಜಿಲ್ಲಾಧಿಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಧಿಕಾರಿ ಪ್ರಶಾಂತಕುಮಾರಗೆ ಮನವಿ ಸಲ್ಲಿಸಿ, ಸರ್ಕಾರ ಪೂರ್ವ ತಯಾರಿಯಿಲ್ಲದೆ ಏಕಾಏಕಿ ನೂತನ ಶಿಕ್ಷಣ ಜಾರಿಗೆ ತರಲು ಪ್ರಯತ್ನಿಸುತ್ತಿದ್ದು, ಇದರಿಂದ ವಿದ್ಯಾರ್ಥಿಗಳ ಭವಿಷ್ಯ ಆಂಧಕಾರಕ್ಕೀಡಾಗಲಿದೆ. ಶಿಕ್ಷಣ ತಜ್ಞರು, ಉಪನ್ಯಾಸಕರು, ಸಾಹಿತಿಗಳು, ವಿದ್ಯಾರ್ಥಿಗಳು ಹಾಗೂ ಪೋಷಕರು ನೂತನ ನೀತಿ ಜಾರಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಹಲವು ಬದಲಾವಣೆ ಮತ್ತು ಸೇರ್ಪಡೆ ಕುರಿತು ಭಿನ್ನಾಭಿಪ್ರಾಯಗಳಿವೆ. ನೇರವಾಗಿ ಶಿಕ್ಷಣದ ಖಾಸಗೀಕರಣ, ಕೇಸರಿಕರಣಕ್ಕೆ ಹೊಸ ನೀತಿ ಅವಕಾಶ ಮಾಡಿಕೊಡಲಿದೆ.
ನೂತನ ಶಿಕ್ಷಣ ನೀತಿ ಆಧಾರಿತ ಪಠ್ಯಕ್ರಮ ತಯಾರಾಗಿಲ್ಲ. ಶಿಕ್ಷಕರು, ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳು ಲಭ್ಯವಿಲ್ಲ. ಶಿಕ್ಷಕರಿಗೆ ಸೂಕ್ತ ತರಬೇತಿಯನ್ನು ನೀಡಲಾಗಿಲ್ಲ. ಇನ್ನೊಂದೆಡೆ ಶಿಕ್ಷಣದ ಗುಣಮಟ್ಟಕ್ಕೆ ನೀತಿ ಮಾರಕವಾಗಲಿದೆ ಎನ್ನುವ ಆತಂಕ ಎಲ್ಲರನ್ನು ಕಾಡುತ್ತಿದೆ. ಸರ್ಕಾರ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿ ಸಂಘಟನೆಗಳ ಅಭಿಪ್ರಾಯವನ್ನು ಪಡೆದು ಪರಿಶೀಲನೆ ನಡೆಸಬೇಕು. ನಾಲ್ಕು ವರ್ಷದ ಪದವಿ ಕೋರ್ಸ್‌ನ್ನು ವಾಪಸ್ ಪಡೆಯಬೇಕು. ವಿದ್ಯಾರ್ಥಿಗಳಿಗೆ ಬಸ್‌ಪಾಸ್ ಉಚಿತವಾಗಿ ವಿತರಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಸಂಘಟನೆ ಜಿಲ್ಲಾಧ್ಯಕ್ಷ ಮಹೇಶ ಚೀಕಲಪರ್ವಿ, ಕಾರ್ಯದರ್ಶಿ ಪೀರಸಾಬ್, ಪದಾಧಿಕಾರಿಗಳಾದ ಕಾರ್ತಿಕ, ಬಸವರಾಜ, ಶ್ರೀಕಾಂತ, ವಿಶ್ವಾಸ್, ಹೇಮಂತ, ಅಮೋಘ ಹಾಗೂ ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.