

ರಾಯಚೂರು: ದಸರಾ ಅಲಂಕಾರದ ಹಬ್ಬವಾಗಿದ್ದು, ದೇವರ ಮೂರ್ತಿಗಳಿಗೆ, ಯಂತ್ರಗಳಿಗೆ ಹಾಗೂ ಕಾರ್ಯ ಸ್ಥಳಗಳನ್ನು ಹೂವುಗಳಿಂದ ಅಲಂಕರಿಸಲಾಗುತ್ತದೆ. ಈ ಹಬ್ಬದ ಸಂರ್ಭದಲ್ಲಿ ಅಲಂಕಾರಕ್ಕಾಗಿ ಚೆಂಡು ಹೂವನ್ನು ಹೆಚ್ಚಾಗಿ ಬಳಸಲಾಗುತ್ತದೆ. ಇದರ ಹಿನ್ನೆಲೆ ಚೆಂಡು ಹೂವಿಗೆ ಬೇಡಿಕೆಯೂ ಹೆಚ್ಚಾಗಿದ್ದು, ಹಬ್ಬದ ದಿನದಂದು ಬೆಲೆ ಗಗನಕ್ಕೇರಿದೆ.
ರಾಯಚೂರು ಜಿಲ್ಲೆಯಲ್ಲಿ ದಸರಾ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಅದರಲ್ಲೂ ಆಯುಧ ಪೂಜೆಯ ದಿನದಂದು ಫ್ಯಾಕ್ಟರಿಗಳು, ಅಂಗಡಿಗಳಲ್ಲಿ, ಮನೆಗಳಲ್ಲಿರುವ ಪುರಾತನ ಕಾಲದ ಆಯುದಗಳಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ.
ಇದನ್ನೂ ಓದಿ: ಜಿಲ್ಲೆಯಲ್ಲಿ ನವರಾತ್ರಿ ಸಂಭ್ರಮ: ಆಯುಧ ಪೂಜೆಗೆ ಸಿದ್ಧತೆ
ಪೂಜೆ ಎಂದರೆ ಹೂ ಬೇಕೆ ಬೇಕು ಅದರಂತೆ ರಾಯಚೂರು ನಗರದಲ್ಲಿ ಆಯುಧ ಪೂಜೆ ವೇಳೆ ಹೂವಿನ ಮಾರಾಟ ಭರ್ಜರಿಯಾಗಿರುತ್ತದೆ. ಹೂವಿನ ದರವೂ ಅಷ್ಟೆ ಭರ್ಜರಿಯಾಗಿರುತ್ತದೆ. ಈ ಹಿನ್ನೆಲೆ ಗುರುವಾರ ನಗರದ ಸೂಪರ್ ಮಾರ್ಕೇಟ್, ಬಂಗೀಕುಂಟಾ ರಸ್ತೆಯಲ್ಲಿ ಹೂ, ಕುಂಬಳಕಾಯಿ, ಬಾಳೆ ದಿಂಡು ಸೇರಿದಂತೆ ಪೂಜಾ ಅಲಂಕಾರಿಕ ಸಾಮಾಗ್ರಿಗಳ ಮಾರಾಟ ಜೋರಾಗಿದೆ.
ನಗರದಲ್ಲಿ ಚೆಂಡು ಹೂವಿನ ಬೆಲೆ ಮಾರುಕಟ್ಟೆಯಲ್ಲಿ ಕೆಜಿಗೆ 150ರವರೆಗಿದ್ದು, ರೈತರಲ್ಲಿ ಕೆಜಿಗೆ 100 ರೂ. ಇದೆ. ಆಯುಧ ಪೂಜೆ ಮತ್ತು ವಿಜಯದಶಮಿ ದಿನದಂದು ಈ ಬೆಲೆ ದುಪ್ಪಟ್ಟು ಆಗುವ ಸಾಧ್ಯತೆಯೂ ಇದೆ. ಆಯುಧ ಪೂಜೆ ಹಾಗೂ ವಿಜಯದಶಮಿಯಂದು ಪ್ರತಿ ಕೆಜಿಗೆ 150 ರಿಂದ 200 ವರೆಗೂ ಬೆಲೆ ಹೆಚ್ಚಳವಾಗುವ ಸಾಧ್ಯತೆಯಿದ್ದು, ಹೂ ಮಾತ್ರವಲ್ಲದೇ ಕುಂಬಳಕಾಯಿ, ಬಾಳೆ ದಿಂಡು, ಮಾವಿನ ಎಲೆ, ಹಣ್ಣುಗಳ ಬೆಲೆಯೂ ದುಪ್ಪಟ್ಟು ಆಗುವ ಸಾಧ್ಯತೆ ಕಾಣುತ್ತಿದೆ.
ರೈತರು ತಾವು ಬೆಳೆದ ಚೆಂಡು ಹೂವನ್ನು ಟ್ರಾೃಕ್ಟರ್ ಮೂಲಕ ತಂದು ನಗರದಲ್ಲಿ ಮಾರಾಟ ಮಾಡುತ್ತಿದ್ದು, ಚೆಂಡು ಹೂ ಖರೀದಿಗೆ ಜನರು ಮುಗಿ ಬಿದ್ದಿದ್ದಾರೆ. ಹಬ್ಬದ ದಿನ ಬೆಲೆ ಹೆಚ್ಚಳವಾಗುವ ಕಾರಣಕ್ಕೆ ಮುಂಚಿತವಾಗಿ ಹೂ ಖರೀದಿ ಮಾಡುತ್ತಿದ್ದಾರೆ.
ಕೆಲವು ರೈತರು ದಸರಾ ಹಿನ್ನೆಲೆ ಮುಂಚಿತವಾಗಿ ಹೂ ಮಾರಾಟಗಾರರಿಗೆ ಹೂವನ್ನು ಮಾರಾಟ ಮಾಡಿದ್ದು, 60-70ವರೆಗೆ ಮಾರಿದ್ದಾರೆ. ಜಮೀನಿನಲ್ಲಿ ಇರುವ ಉಳಿದ ಹೂವನ್ನು ನೇರವಾಗಿ ಮಾರುಕಟ್ಟೆಗೆ ತಂದು ಮಾರುವ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದಾರೆ.
ನಗರದ ಸೂಪರ್ ಮಾರ್ಕೇಟ್‌ನಲ್ಲಿ ಹೂ, ಹಣ್ಣು ಪೂಜಾ ಸಾಮಾಗ್ರಿಗಳು ಒಂದೇ ಕಡೆ ಸಿಗುತ್ತವೆ. ಆದರೆ ಹೂವಿನ ಬೆಲೆ ಹೆಚ್ಚಾಗಿರುವ ಕಾರಣ ಜನರು ಹೂ ಖರೀದಿಗೆ ನಗರದ ಬಸವೇಶ್ವರ ವೃತ್ತದ ಹತ್ತಿರ ರೈತರು ತಂದ ಬಿಡಿ ಚೆಂಡು ಹೂವಿನ ಖರೀದಿಗೆ ಮುಂದಾಗಿದ್ದಾರೆ.
ಕಷ್ಟ ಪಟ್ಟು ಬೆಳೆ ಬೆಳೆಯುತ್ತೇವೆ ಆದರೆ ಸರಿಯಾದ ಬೆಲೆ ಸಿಗುವುದಿಲ್ಲ. ಹಬ್ಬದ ಸಂದರ್ಭದಲ್ಲಾದರೂ ಬೆಳೆದ ಹೂವಿಗೆ ಉತ್ತಮ ಬೆಲೆ ದೊರೆಯಬೇಕಾಗಿದೆ. | ಲಕ್ಷ್ಮೀರೆಡ್ಡಿ, ರೈತ, ಮನ್ಸ್ಲಾಪೂರ
ಒಂದುವರೆ ಎಕರೆ ಚೆಂಡು ಹೂ ಹಾಕಿದ್ದೆ, ಹೆಚ್ಚಿನ ಮಳೆಯಾದ ಕಾರಣ ಅರ್ಧ ಎಕರೆಯಷ್ಟು ಬೆಳೆಗೆ ಹಾನಿಯಾಗಿದೆ. ಉಳಿದ ಬೆಳೆಯನ್ನು ನಗರದಲ್ಲಿ ಮಾರುತ್ತಿರುವೆ. ಹೂ ಮಾರಾಟಗಾರರಿಗೆ ಮಾರಿದರೆ ಲಾಭ ಕಮ್ಮಿ ಹಾಗಾಗಿ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುತ್ತಿರುವೆ. | ನಾಗರಾಜ, ರೈತ, ಕಸ್ಬೆ ಕ್ಯಾಂಪ್
ಕಳೆದ ಬಾರಿ ಹಬ್ಬದ ದಿನದಂದು ಹೂವಿನ ಬೆಲೆ ಹೆಚ್ಚಳವಾಗಿತ್ತು ಆದರೆ ಈ ಬಾರಿ ಮುಂಚಿತವಾಗಿ ಮಾರುಕಟ್ಟೆಯಲ್ಲಿ ರೇಟ್ ಜಾಸ್ತಿಯಾಗಿದೆ. ಆದ್ದರಿಂದ ರೈತರಿಂದ ನೇರವಾಗಿ ಖರೀದಿಸುತ್ತಿರುವೆ. | ನಾಗು ರಡ್ಡಿ, ಸ್ಥಳೀಯ, ರಾಯಚೂರು