ಜಿಲ್ಲೆಯಲ್ಲಿ ನವರಾತ್ರಿ ಸಂಭ್ರಮ: ಆಯುಧ ಪೂಜೆಗೆ ಸಿದ್ಧತೆ

IMG_20241010_225952
Published on

ರಾಯಚೂರು: ದಸರಾ ನವರಾತ್ರಿ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲೆಯ ವಿವಿಧೆಡೆ ನವರಾತ್ರಿಯನ್ನು ಸಡಗರದಿಂದ ಆಚರಿಸಲಾಗುತ್ತಿದ್ದು, 8 ನೇ ದಿನವಾದ ಗುರುವಾರ ಹಲವು ದೇವಸ್ಥಾನಗಳಲ್ಲಿ ದುರ್ಗಾ ದೇವಿಗೆ ವಿಶೇಷ ಪೂಜೆ ಹಾಗೂ ಅಲಂಕಾರಗಳನ್ನು ಮಾಡಲಾಯಿತು. ಶುಕ್ರವಾರದ ನವರಾತ್ರಿ ಉತ್ಸವಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಯಿತು.

ರಾಯಚೂರು ನಗರದ ಬಂಗೀಕುಂಟಾ ರಸ್ತೆಯಲ್ಲಿ ಪ್ರತಿಷ್ಠಾಪಿಸಲಾದ ಭವಾನಿ ದೇವಿಮೂರ್ತಿ, ಬೋಳಮಾನದೊಡ್ಡಿ ರಸ್ತೆಯ ತುಳಜಾ ಭವಾನಿ ದೇವಸ್ಥಾನ, ಅಲ್ಲಮಪ್ರಭು ಕಾಲನಿಯ ತಾಯಮ್ಮ ದೇವಸ್ಥಾನದಲ್ಲಿರುವ ಭವಾನಿ ದೇವಿಗೆ ವಿಶೇಷ ಪೂಜೆಯನ್ನು ನೆರವೇರಿಸಲಾಯಿತು.

ಉಪ್ಪಾರವಾಡಿಯ ಶ್ರೀ ಲಕ್ಷ್ಮೀವೆಂಕಟೇಶ್ವರ ದೇವಸ್ಥಾನದಲ್ಲಿ ವೆಂಕಟೇಶ್ವರ ಸ್ವಾಮಿಯ ಅಶ್ವವಾಹನೋತ್ಸವ ಹಾಗೂ ಉಚ್ಛಾಯ ಮಹೋತ್ಸವ ಜರುಗಿಸಲಾಯಿತು.

ಬೆಳಿಗ್ಗೆಯಿಂದಲೇ ನಗರದ ಹಲವು ದೇವಸ್ಥಾನಗಳಲ್ಲಿ ಕ್ಷೀರಾಭಿಷೇಕ, ರುದ್ರಾಭಿಷೇಕ, ಕುಂಕುಮಾರ್ಚನೆ, ಪುಷ್ಪ ಅಭಿಷೇಕ ಹಾಗೂ ದೇವಿ ಮೂರ್ತಿಗಳಿಗೆ ವಿಶೇಷ ಅಲಂಕಾರಗಳನ್ನು ಮಾಡಲಾಯಿತು.

ದಸರಾ ಹಬ್ಬದ ಅಂಗವಾಗಿ ರಾಯಚೂರು ನಗರದ ಎಸ್ಪಿ ಕಚೇರಿ ಸೇರಿ ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಗಳಲ್ಲಿ ಆಯುಧ ಪೂಜೆಯನ್ನು ಹಮ್ಮಿಕೊಳ್ಳಲಾಗಿದ್ದು, ಠಾಣೆಯಲ್ಲಿರುವ ಶಸ್ತ್ರಾಸ್ತ್ರಗಳು, ವಾಹನಗಳು, ಹಾಗೂ ಠಾಣೆಯಲ್ಲಿರುವ ಇನ್ನಿತರ ಉಪಕರಣಗಳಿಗೆ ವಿಶೇಷ ಪೂಜೆ ನೆರವೇರಿಸಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net