ಮತದಾನದ ಹಕ್ಕು ದುರ್ಬಳಕೆಯಾದರೆ ದೇಶಕ್ಕೆ ಧಕ್ಕೆ

25012020 Raichur National Voters Day
Published on

ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಶಂಕರ ರಾಮಾ ಕಳವಳ | ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮ


ರಾಯಚೂರು: ಮತದಾರರು ಆಮಿಷೆ, ಪ್ರಲೋಭನೆಗಳಿಗೆ ಗುರಿಯಾಗಿ ಸಂವಿಧಾನ ನೀಡಿದ ಹಕ್ಕನ್ನು ದುರ್ಬಳಕೆ ಮಾಡಿಕೊಂಡರೆ ಬಲಿಷ್ಠ ಭಾರತ ನಿರ್ಮಾಣಕ್ಕೆ ಧಕ್ಕೆ ಆಗಲಿದೆ ಎನ್ನುವುದನ್ನು ಯುವ ಸಮುದಾಯ ಅರಿತು ಮತದಾನ ಮಾಡಬೇಕು ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಬೈಲೂರು ಶಂಕರ ರಾಮಾ ಹೇಳಿದರು.

ನಗರದ ಪಂ.ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಭಾರತ ಚುನಾವಣಾ ಆಯೋಗ ಮತ್ತು ಜಿಲ್ಲಾ ಚುನಾವಣಾಧಿಕಾರಿಗಳ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ್ ಮಾತನಾಡಿ, ದೇಶದ ಪ್ರತಿಯೊಬ್ಬರೂ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಹಕ್ಕನ್ನು ಹೊಂದಿದ್ದಾರೆ. ನಾನಾ ಕಾರಣಗಳಿಂದ ಕೆಲ ದೇಶಗಳಲ್ಲಿ ಮಹಿಳೆಯರಿಗೆ ಹಕ್ಕನ್ನು ನೀಡಿಲ್ಲ ಎಂದರು.

ಇದೇ ಸಂದರ್ಭದಲ್ಲಿ ಹೊಸದಾಗಿ ಸೇರ್ಪಡೆಯಾದ ಮತದಾರರಿಗೆ ಎಪಿಕ್ ಕಾರ್ಡ್ ವಿತರಿಸಲಾಯಿತು. ರಾಷ್ಟ್ರೀಯ ಮತದಾರರ ದಿನಾಚರಣೆ ನಿಮಿತ್ತ ಹಮ್ಮಿಕೊಂಡಿದ್ದ ರಸಪ್ರಶ್ನೆ, ಪ್ರಬಂಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ಜಿಲ್ಲೆಯ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಮತ್ತು ಪುಸ್ತಕಗಳನ್ನು ಬಹುಮಾನವಾಗಿ ನೀಡಲಾಯಿತು.
ಎಡಿಸಿ ದುರಗೇಶ, ಎಎಸ್ಪಿ ಹರಿಬಾಬು, ಸಹಾಯಕ ಆಯುಕ್ತ ಸಂತೋಷ್ ಕಾಮಗೌಡ, ತಹಸೀಲ್ದಾರ್ ಡಾ.ಹಂಪಣ್ಣ ಸಜ್ಜನ್, ಡಿಡಿಪಿಐ ಬಿ.ಎಚ್.ಗೋನಾಳ, ನಗರ ಯೋಜನಾಧಿಕಾರಿ ಮಹೇಂದ್ರಕುಮಾರ್ ಇತರರಿದ್ದರು.

ಭಾರತದಲ್ಲಿ 18ವರ್ಷ ತುಂಬಿದವರಿಗೆ ಮತದಾನ ಮಾಡುವ ಸಮಾನ ಹಕ್ಕನ್ನು ಕಲ್ಪಿಸಿದೆ. ನಗರ ಪ್ರದೇಶದಲ್ಲಿ ಮತದಾನ ಮಾಡುವವರ ಸಂಖ್ಯೆ ಕಡಿಮೆಯಾಗಿದೆ. ಒಬ್ಬರು ಮತ ಹಾಕದಿದ್ದರೆ ಏನು ಬದಲಾವಣೆಗಳು ಆಗುವುದಿಲ್ಲವೆಂಬ ನಿರ್ಲಕ್ಷತನವನ್ನು ಬಿಡಬೇಕು. ಒಂದೇ ಒಂದು ಮತವೂ ನಿರ್ಣಾಯಕವಾಗಿರುತ್ತದೆ.| ಆರ್.ವೆಂಕಟೇಶ ಕುಮಾರ್, ಡಿಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net