

ರಾಯಚೂರು : ನರೇಗಾ ಸಮರ್ಪಕ ಅನುಷ್ಠಾನ ಹಾಗೂ ಕೂಲಿ ಕಾರ್ಮಿಕರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸುವಂತೆ ಒತ್ತಾಯಿಸಿ ಸಿಇಒ ಅವರ ನಿವಾಸಕ್ಕೆ ಮುತ್ತಿಗೆ ಹಾಕಲು ಹೊರಟ್ಟಿದ್ದ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ನೇತೃತ್ವದ ಧರಣಿ ನಿರತ ಕಾರ್ಮಿಕರನ್ನು ಪೊಲೀಸರು ಬಂಧಿಸಿದರು.
ನಗರದ ಟಿಪ್ಪು ಸುಲ್ತಾನ್ ಉದ್ಯಾನದಲ್ಲಿ ಮಾ.5ರಿಂದ ಆರಂಭವಾಗಿದ್ದ ಕೂಲಿ ಕಾರರ ಪ್ರತಿಭಟನೆಗೆ ಜಿಪಂ ಅಧಿಕಾರಿಗಳು ಖಚಿತ ಭರವಸೆ ನೀಡದ ಕಾರಣ ಧರಣಿ ಮುಂದುವರೆದಿತ್ತು. ಧರಣಿ ಸ್ಥಳಕ್ಕೆ ಸಿಇಒ ಬರಬೇಕು ಎಂದು ಬಿಗಿ ಪಟ್ಟು ಹಿಡಿದರು. ಚರ್ಚಿಸಲು ಕಚೇರಿಗೆ ನಾಲ್ವರು ಮುಖಂಡರು ಬರಬಹುದು ಎಂದು ಸಿಇಒ ಸಂದೇಶ ಕಳಿಸಿದರು. ಕರೊನಾ ಹಿನ್ನೆಲೆಯಲ್ಲಿ ಒಂದೇ ಕಡೆ ಹೆಚ್ಚಿನ ಜನ ಸೇರಕೂಡದು. ಮನವಿ ನೀಡಿ ಧರಣಿ ವಾಪಸ್ ಪಡೆಯಲು ಪೊಲೀಸರು ಮನವೋಲಿಸಲು ಮುಂದಾಗಿದ್ದರು. ಅದಕ್ಕೆ ಒಪ್ಪದೆ ಮುಖಂಡರು ಮತ್ತು ಕಾರ್ಮಿಕರು ಸಿಇಒ ನಿವಾಸಕ್ಕೆ ಮುತ್ತಿಗೆ ಹಾಕಲು ರಸ್ತೆಗೆ ಇಳಿದಾಗ ತಡೆಯಲು ಮುಂದಾದ ಪೊಲೀಸರ ಜತೆ ವಾಗ್ವಾದ ನಡೆಯಿತು. ತಕ್ಷಣವೇ ಪೊಲೀಸರು ಎಲ್ಲ ಕೂಲಿಕಾರರನ್ನು ಬಂಧಿಸಿ ಎಸ್ಪಿ ಕಚೇರಿಗೆ ಕರೆದೊಯ್ದು ನಂತರ ಬಿಡುಗಡೆ ಮಾಡಿದರು.
ಗ್ರಾಕೂಸ್ ಪದಾಧಿಕಾರಿಗಳಾದ ಆಭಯ್, ಗುರುರಾಜ, ಗೋವಿಂದು, ಬಸವರಾಜ, ಕಷ್ಣಪ್ರಸಾದ್, ಗೌರಮ್ಮ, ಈರಮ್ಮ, ಹನುಮಕ್ಕ, ರಾಘವೇಂದ್ರ, ರೇಣುಕಮ್ಮ ಸೇರಿ ನೂರಾರು ಕಾರ್ಮಿಕರು ಪಾಲ್ಗೊಂಡಿದ್ದರು.