ನರೇಗಾ ಕೆಲಸ ಸಮರ್ಪಕ ನೀಡಲು ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ಒತ್ತಾಯ

Raichur Rural Laborers Organization Portest
ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡಲು ವಿಳಂಬ ಮಾಡದಂತೆ ಒತ್ತಾಯಿಸಿ ರಾಯಚೂರು ಡಿಸಿ ಕಚೇರಿ ಮುಂದೆ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ಮಂಗಳವಾರ ಪ್ರತಿಭಟನೆ ನಡೆಸಿತು.
Published on

ರಾಯಚೂರು: ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕಾರ್ಮಿಕರಿಗೆ 200 ದಿನಗಳ ಕೆಲಸ ನೀಡುವುದೂ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ಮಂಗಳವಾರ ಪ್ರತಿಭಟನೆ ನಡೆಸಿ, ಜಿಪಂ ಸಿಇಒ ಶಶಿಧರ ಕುರೇರಗೆ ಮನವಿ ಸಲ್ಲಿಸಲಾಯಿತು.

ಅತಿವೃಷ್ಟಿಯಿಂದಾಗಿ ಕೂಲಿ ಕಾರ್ಮಿಕರು ಕೆಲಸ ಸಿಗದೆ ಸಂಕಷ್ಟದಲ್ಲಿದ್ದು, ಕೆಲಸ ನೀಡುವಲ್ಲಿ ವಿಳಂಬ ಧೋರಣೆ ನಿಲ್ಲಿಸಿ ಅರ್ಜಿ ಸಲ್ಲಿಸಿದ ತಕ್ಷಣ ಕೆಲಸ ನೀಡಬೇಕು. ಕೂಲಿ ಕಾರ್ಮಿಕರಿಗೆ ಸಾಮಗ್ರಿಗಳ ಬಳಕೆ ಮತ್ತು ದುರಸ್ತಿಗೆ ಪ್ರತಿದಿನ 10 ರೂ. ಕೂಲಿ ಜತೆಗೆ ಸೇರಿಸಿ ನೀಡಲಾಗುತ್ತಿತ್ತು. ಅದನ್ನು ನಿಲ್ಲಿಸಲಾಗಿದ್ದು, ಗ್ರಾಪಂನಿಂದ ಸಾಮಗ್ರಿ ಪೂರೈಸಬೇಕು. ಇಲ್ಲವೇ ಕೂಲಿ ಹಣವನ್ನು 20 ರೂ.ಗೆ ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿದರು.

ಐದು ಕಿಮೀಗಿಂತ ಹೆಚ್ಚಿನ ದೂರದಲ್ಲಿ ಕೆಲಸ ನೀಡಿದರೆ ಕೂಲಿ ಜತೆಗೆ ಶೇ.10ರಷ್ಟು ಹೆಚ್ಚುವರಿ ಹಣ ನೀಡಲಾಗುತ್ತಿತ್ತು. ಅದನ್ನು ಶೇ.20ಕ್ಕೆ ಹೆಚ್ಚಳ ಮಾಡಬೇಕು. ಕಾರ್ಮಿಕರಿಗೆ ಕೆಲಸ ಮಾಡಿದ 15 ದಿನದೊಳಗೆ ಕೂಲಿ ಪಾವತಿಸಬೇಕು. ಹಲವಾರು ಹಳ್ಳಿಗಳಲ್ಲಿ ಕಾರ್ಮಿಕರು ಜಾಬ್‌ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಿದ್ದು, ಕಾರ್ಡ್ ನೀಡುತ್ತಿಲ್ಲ. ಕೆಲವೊಂದು ಹಳ್ಳಿಗಳಲ್ಲಿ ಎಂಟತ್ತು ತಿಂಗಳಿಂದ ಕೆಲಸ ನೀಡಿಲ್ಲ. ಕೆಲಸ ಕೊಡಲು ಕಾಮಗಾರಿಯನ್ನು ಹುಡುಕಾಡಿ ಎಂದು ಪಿಡಿಒಗಳು ಹೇಳುತ್ತಿದ್ದಾರೆ. ಕೂಡಲೇ ಎಲ್ಲ ಸಮಸ್ಯೆಗಳನ್ನು ವಾರದೊಳಗೆ ಇತ್ಯರ್ಥಗೊಳಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net