

ಡಿಸಿಎಂ ಲಕ್ಷ್ಮಣ ಸವದಿಗೆ ಮನವಿ
ರಾಯಚೂರು: ನಾರಾಯಣಪುರ ಬಲದಂಡೆ ಮುಖ್ಯ ಕಾಲುವೆ ಆಧುನೀಕರಣ ಕಾಮಗಾರಿ ಕಳಪೆಯಾಗಿದ್ದು, ಈ ಕುರಿತು ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವಂತೆ ಜೆಡಿಎಸ್ ಜಿಲ್ಲಾ ಘಟಕ ಒತ್ತಾಯಿಸಿದೆ.
ಪಕ್ಷದ ನಿಯೋಗ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿಗೆ ಮಂಗಳವಾರ ಮನವಿ ಸಲ್ಲಿಸಿ, ಮುಖ್ಯ ಕಾಲುವೆ 0 ದಿಂದ 95 ಕಿ.ಮೀ.ವರೆಗೆ ತರಾತುರಿಯಲ್ಲಿ ಆಧುನೀಕರಣ ನಡೆದಿದೆ. ಕೆಲಸ ಗುಣಮಟ್ಟದಿಂದ ಕೂಡಿಲ್ಲ. ಈ ಬಗ್ಗೆ ದೂರು ಬಂದರೂ ಕ್ರಮಕೈಗೊಳ್ಳುತ್ತಿಲ್ಲ ಎಂದು ದೂರಿದರು.
ಕಾಮಗಾರಿಗೆ 900 ಕೋಟಿ ರೂ. ಅಂದಾಜು ಪಟ್ಟಿ ತಯಾರಿಸುವ ಬಗ್ಗೆ ಅನುಮಾನ ಇದೆ. ಗುತ್ತಿಗೆದಾರರು ಪ್ರಭಾವ ಬಳಿಸಿ ಹೆಚ್ಚಿನ ಮೊತ್ತದ ಅಂದಾಜು ಪಟ್ಟಿ ತಯಾರಿಸಿದ್ದಾರೆ. ಕಾಮಗಾರಿ ಸ್ಥಳದಲ್ಲಿ ಅಧಿಕಾರಿಗಳು ಹಾಜರಿರಲ್ಲ ಎಂದು ಆರೋಪಿಸಿದರು.
ಕಳಪೆ ಕಾಮಗಾರಿಯಿಂದಾಗಿ ಕಳೆದ ವರ್ಷ ನೀರು ಹರಿಸಿದಾಗ ಕಾಲುವೆ ಒಡೆದು ಅಪಾರ ಪ್ರಮಾಣದ ಬೆಳೆ ಹಾನಿಯಾಗಿತ್ತು. ಈ ಬಾರಿಯಾದರೂ ಕಳಪೆ ಕಾಮಗಾರಿ ತಡೆಯಬೇಕು. ಕೆಲಸದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ನಿಯೋಗದಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಎಂ.ವಿರೂಪಾಕ್ಷಿ, ಮುಖಂಡರಾದ ಯೂಸೂಫ್ ಖಾನ್, ಎನ್.ಶಿವಶಂಕರ್, ಅಕ್ಬರ್ ನಾಗುಂಡಿ, ತಿಮ್ಮಾರೆಡ್ಡಿ, ವಿಶ್ವನಾಥ ಪಟ್ಟಿ ಇತರರಿದ್ದರು.