ಸೋಮಶೇಖರರೆಡ್ಡಿ ವಿರುದ್ಧ ದೂರು ದಾಖಲು

27012020 Raichur R Manasayya
Published on

ರಾಯಚೂರು: ಮುಸ್ಲಿಂ ಸಮುದಾಯಕ್ಕೆ ಬೆದರಿಕೆ ರೀತಿಯಲ್ಲಿ ಹೇಳಿಕೆ ನೀಡಿರುವ ಬಳ್ಳಾರಿ ಶಾಸಕ ಸೋಮಶೇಖರ ರೆಡ್ಡಿ ವಿರುದ್ಧ ಸ್ಥಳೀಯ ಸದರ್ ಬಜಾರ್ ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಸಂವಿಧಾನ ಹಕ್ಕುಗಳ ನಾಗರಿಕ ವೇದಿಕೆ ಮುಖಂಡ ಆರ್.ಮಾನಸಯ್ಯ ತಿಳಿಸಿದರು.

ಸ್ಥಳೀಯ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಸಂಜೆ ಮಾತನಾಡಿ, ವೇದಿಕೆಯಿಂದ ಠಾಣೆಗೆ ದೂರು ನೀಡಲಾಗಿದ್ದರೂ ಬಳ್ಳಾರಿಯಲ್ಲಿ ದೂರು ದಾಖಲಾಗಿದೆ ಎನ್ನುವ ಕಾರಣಕ್ಕೆ ಸ್ಥಳೀಯವಾಗಿ ಪ್ರಕರಣ ದಾಖಲಿಸಿಕೊಂಡಿದ್ದಿಲ್ಲ ಎಂದರು.

ಪ್ರಕರಣ ದಾಖಲಿಸದಿರುವ ಕುರಿತು ನ್ಯಾಯಾಲಯಕ್ಕೆ ಮೊರೆ ಹೋಗಲಾಗಿತ್ತು. ಜೆಎಂಎಫ್‌ಸಿ 2ನೇ ಸತ್ರ ನ್ಯಾಯಾಲಯದ ನ್ಯಾಯಾಧೀಶ ಎಂ.ನರಸಿಂಹಮೂರ್ತಿ ಪ್ರಕರಣ ದಾಖಲಿಸಿಕೊಳ್ಳುವಂತೆ ನೀಡಿರುವ ಆದೇಶದ ಹಿನ್ನೆಲೆಯಲ್ಲಿ ಠಾಣೆಯಲ್ಲಿ ಸೋಮಶೇಖರ ರೆಡ್ಡಿ ವಿರುದ್ಧ ಐಪಿಸಿ (1860) ಸೆಕ್ಷನ್ 153, 153ಎ, 506 ಮತ್ತು 34ರಡಿ ದೂರು ದಾಖಲಿಸಿಕೊಳ್ಳಲಾಗಿದೆ.

ಕೂಡಲೇ ಸೋಮಶೇಖರ ರೆಡ್ಡಿಯನ್ನು ಶಾಸಕ ಸ್ಥಾನದಿಂದ ವಜಾಗೊಳಿಸಿ, ಬಂಧಿಸಬೇಕು. ಗೂಂಡಾಗಳ ರೀತಿ ವರ್ತಿಸಿ, ಹೇಳಿಕೆ ನೀಡುತ್ತಿರುವ ಬಿಜೆಪಿ ಶಾಸಕರಿಗೆ ಕಡಿವಾಣ ಹಾಕಬೇಕು ಎಂದು ಆರ್.ಮಾನಸಯ್ಯ ತಿಳಿಸಿದರು.

ವೇದಿಕೆ ಮುಖಂಡರಾದ ಮಹ್ಮದ್ ಖಲೀಂ ಸಾಬ್, ಎಸ್.ಮಾರೆಪ್ಪ, ನಜೀರ್ ಅಹ್ಮದ್ ಹಾಗೂ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net