

ರಾಯಚೂರು: ನಗರದ ಯರಮರಸ್ ಕ್ಯಾಂಪ್ ಎಸ್‌ಎಲ್‌ಎನ್ ಇಂಜಿನಿಯರಿಂಗ್ ಕಾಲೇಜು ಪಕ್ಕದ ಮನೆಯೊಂದರಲ್ಲಿ ಸೆ.29ರಂದು ತಡರಾತ್ರಿ ನಡೆದಿದ್ದ ತ್ರಿವಳಿ ಕೊಲೆ ಪ್ರಕರಣದಲ್ಲಿ ಸಾಯಿಸೌರಭ ಎಂಬಾತನನ್ನು ಶುಕ್ರವಾರ ಹೈದರಾಬಾದ್‌ನಲ್ಲಿ ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ ನಿಕಮ್ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆರೋಪಿ ಪತ್ತೆಗಾಗಿ ಸಿಪಿಐ ಹನುಮರಡ್ಡೆಪ್ಪ ನೇತೃತ್ವದಲ್ಲಿ ರಚಿಸಲಾಗಿದ್ದ ವಿಶೇಷ ತಂಡವು ಈತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಸಂತೋಷಿ (45), ವೈಷ್ಣವಿ (19) ಮತ್ತು ಆರತಿ (14) ಕೊಲೆಗೀಡಾಗಿದ್ದರು. ಕೌಟುಂಬಿಕ ದ್ವೇಷದಿಂದ ವೈಷ್ಣವಿ ಪತಿ, ಹೈದರಾಬಾದಿನ ಸಾಯಿ ಸೌರಭ ಕೊಲೆ ಮಾಡಿ ಪರಾರಿಯಾಗಿದ್ದ. ಆರು ತಿಂಗಳ ಹಿಂದೆ ವೈಷ್ಣವಿ ಮತ್ತು ಸಾಯಿ ಸೌರಭ ಮದುವೆಯಾಗಿತ್ತು. ಇಬ್ಬರ ನಡುವೆ ಜಗಳವಾಗಿ ತಿಂಗಳ ಹಿಂದೆ ತಾಯಿ ಮನೆಗೆ ವೈಷ್ಣವಿ ಬಂದಿದ್ದಳು. ಸೆ.29ರಂದು ರಾತ್ರಿ ಇಬ್ಬರು ಸ್ನೇಹಿತರೊಂದಿಗೆ ರಾಯಚೂರಿಗೆ ಬಂದಿದ್ದ ಸಾಯಿ ಸೌರಭ, ಹೆಂಡತಿಯೊಂದಿಗೆ ಜಗಳ ತೆಗೆದು, ಅತ್ತೆ ಸಂತೋಷಿಯನ್ನು ಚಾಕುವಿನಿಂದ ಇರಿದು ಸಾಯಿಸಿದ್ದ. ಬಿಡಿಸಲು ಬಂದ ಪತ್ನಿಯ ತಂಗಿ ಆರತಿಯನ್ನು ಕೊಲೆ ಮಾಡಿದ್ದ. ನಂತರ ಪತ್ನಿ ವೈಷ್ಣವಿಯನ್ನೂ ಸಾಯಿಸಿ ಪರಾರಿಯಾಗಿದ್ದ. ಈಗ ಹೈದರಾಬಾದ್‌ನಲ್ಲಿ ಸಾಯಿ ಸೌರಭನನ್ನು ಬಂಧಿಸಿದ್ದು, ಆತನ ಸ್ನೇಹಿತರು ಪರಾರಿಯಾಗಿದ್ದರೆ. ಸಾಯಿ ಸೌರಭ ವಿರುದ್ಧ ಹೈದರಬಾದಿನ ಠಾಣೆಯಲ್ಲಿ ರೌಡಿ ಶೀಟರ್ ಪ್ರಕರಣವಿದೆ ಎಂದು ಮಾಹಿತಿ ನೀಡಿದರು.
ಡಿವೈಎಸ್ಪಿ ಶಿವನಗೌಡ ಪಾಟೀಲ್, ಸಿಪಿಐ ಹನುಮರಡ್ಡೆಪ್ಪ, ಪಿಎಸ್‌ಐಗಳಾದ ರಂಗಪ್ಪ ದೊಡ್ಡಮನಿ, ಹುಲಿಗೇಶ, ಬಂದೇ ಅಲಿಬೇಗ್, ಸಿಬ್ಬಂದಿಗಳಾದ ರವಿರಾಜ, ಡಾಕಪ್ಪ, ಮಹೆಬೂಬ್, ಮುನಿಸ್ವಾಮಿ, ನಿಂಗಪ್ಪ, ಶೇಖರಪ್ಪ, ಗೋಪಾಲ, ಶರಣಪ್ಪ, ಆನಂದ, ಅಜೀಮ್ ಉಪಸ್ಥಿತರಿದ್ದರು.