ಪೌರ ಕಾರ್ಮಿಕರ ಸೇವೆ ಸ್ಮರಣೀಯ; ನಗರಸಭೆ ಅಧ್ಯಕ್ಷ ಈ.ವಿನಯ್ ಗುಣಗಾನ

02022021 Raichur Scavenging Prohibition Act Workshop
Published on

ಅರಿವು ಮೂಡಿಸುವ ಕಾರ್ಯಾಗಾರಕ್ಕೆ ಚಾಲನೆ

ರಾಯಚೂರು: ನಗರ ಸ್ವಚ್ಛತೆಗೆ ಶ್ರಮಿಸುತ್ತಿರುವ ಪೌರಕಾರ್ಮಿಕರ ಸೇವೆ ಶ್ಲಾಘನೀಯ ಎಂದು ನಗರಸಭೆ ಅಧ್ಯಕ್ಷ ಈ.ವಿನಯ್ ಕುಮಾರ್ ಶ್ಲಾಘಿಸಿದರು.

ಪಂ.ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ, ನಗರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಮಂಗಳವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಮ್ಯಾನುವಲ್ ಸ್ಕ್ಯಾವೆಂಜಿಂಗ್ ನಿಷೇಧ ಕಾಯ್ದೆ-2013ರ ಅನುಷ್ಠಾನ ಮತ್ತು ಪುನರ್ವಸತಿ ಕುರಿತು ಸಫಾಯಿ ಕರ್ಮಚಾರಿಗಳು, ಸ್ಥಳೀಯ ಸಂಸ್ಥೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಅರಿವು ಮೂಡಿಸುವ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಪೌರಕಾರ್ಮಿಕರು, ಸಫಾಯಿ ಕರ್ಮಚಾರಿಗಳು ಅಗತ್ಯವಿರುವ ಸುರಕ್ಷತಾ ವಸ್ತುಗಳನ್ನು ಬಳಸಿಕೊಂಡು ಕಾರ್ಯನಿರ್ವಹಣೆ ಮಾಡಬೇಕು. ಸುರಕ್ಷತಾ ಪರಿಕರವಿಲ್ಲದೆ ಕೆಲಸ ಮಾಡುವುದು ಅಪಾಯಕ್ಕೆ ಆಹ್ವಾನ ನೀಡಿದಂತೆ. ಕಾರ್ಮಿಕರಿಗೆ ಸರ್ಕಾರ ಅನೇಕ ಸೌಲಭ್ಯ ನೀಡುತ್ತಿದ್ದು, ಪ್ರಯೋಜನೆ ಪಡೆದುಕೊಳ್ಳಬೇಕು. ಸ್ವಚ್ಛತಾ ಕಾರ್ಯದಲ್ಲಿ ತೊಡಗುವ ಮುನ್ನ ಮುಂಜಾಗ್ರತೆ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ನಗರಸಭೆ ಹೊಸ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದಮೇಲೆ ಧೂಳುಮುಕ್ತ ನಗರವನ್ನಾಗಿಸುವಲ್ಲಿ ಪೌರಕಾರ್ಮಿಕರ ಶ್ರಮ ಅನ್ಯನವಾಗಿದೆ. ನಗರದ ವಿವಿಧ ಬಡಾವಣೆಗಳಲ್ಲಿ ಕಸ ವಿಲೇವಾರಿ ಸೇರಿ ನಗರದ ಸ್ವಚ್ಛತೆಗೆ ಪೌರಕಾರ್ಮಿಕರು ತಮ್ಮದೇ ವಿಶೇಷ ಕೊಡುಗೆ ನೀಡಿದ್ದಾರೆ. ಸಾರ್ವಜನಿಕರು ಪೌರಕಾರ್ಮಿಕರನ್ನು ದೇವರ ಸಮಾನವಾಗಿ ಕಾಣಬೇಕು. ಮುಂಬರುವ ದಿನಗಳಲ್ಲಿ ಕಾರ್ಮಿಕರಿಗೆ ನೇರವಾಗಿ ವೇತನ ಪಾವತಿಸಲು ಕ್ರಮ ಕೈಗೊಳ್ಳಲಾಗುತ್ತದೆ. ನಗರದ ಅಭಿವೃದ್ಧಿಗೆ ಶಾಸಕರು, ಸಂಸದರು, ಮಾಜಿ ಸಂಸದರು, ಮಾಜಿ ಶಾಸಕರು, ಮಾಜಿ ವಿಧಾನ ಪರಿಷತ್ ಸದಸ್ಯರು ಹಾಗೂ ಜಿಲ್ಲಾಧಿಕಾರಿ ಸಲಹೆ ಸೂಚನೆ ಪಡೆದು ಕಾರ್ಯನಿರ್ವಹಿಸಲಾಗುತ್ತದೆ ಎಂದರು.

ಸಹಾಯಕ ಆಯುಕ್ತ ಸಂತೋಷ ಕಾಮಗೌಡ ಮಾತನಾಡಿ, ಪೌರಕಾರ್ಮಿಕರು ನಗರದ ಸ್ವಚ್ಛತೆ ಶ್ರಮಿಸುತ್ತಿರುವ ಸಂದರ್ಭದಲ್ಲಿ ಆತ್ಮ ರಕ್ಷಣೆ ಅಗತ್ಯ ಎಂದರು.

ನಗರಸಭೆ ಸದಸ್ಯರಾದ ದರೂರು ಬಸವರಾಜ ಪಾಟೀಲ್, ಬಿ.ರಮೇಶ, ನರಸಿಂಹಲು ಮಾಡಗಿರಿ, ಪ್ರಭಾರ ಪೌರಾಯುಕ್ತ ಎಚ್.ವೆಂಕಟೇಶ, ಎಂ.ಆರ್.ಭೇರಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net