

ಕೋರಂ ಕೊರತೆಯಿಂದ ಸಭೆ ಮುಂದೂಡಿಕೆ
ರಾಯಚೂರು: ನಗರಸಭೆ ಅಧ್ಯಕ್ಷ ಇ.ವಿನಯಕುಮಾರ ಏಕಪಕ್ಷೀಯ ನಿರ್ಧಾರಗಳಿಂದಾಗಿ ಆಕ್ರೋಶಗೊಂಡಿರುವ ಸದಸ್ಯರು ಸೋಮವಾರ ಕರೆಯಲಾಗಿದ್ದ ಸಾಮಾನ್ಯ ಸಭೆಗೆ ಗೈರು ಹಾಜರಾಗಿದ್ದರಿಂದ ಕೋರಂ ಕೊರತೆಯುಂಟಾಗಿ ಸಭೆಯನ್ನು ಮುಂದೂಡಲಾಯಿತು.
ಅನುದಾನ ಲಭ್ಯತೆಯಿಲ್ಲದೇ, ಸದಸ್ಯರೊಂದಿಗೆ ಸಮಾಲೋಚನೆ ನಡೆಸದೇ ಸಭೆಯಲ್ಲಿ 228 ಪ್ರಸ್ತಾವನೆಗಳನ್ನು ಸಲ್ಲಿಸಲು ಅಧ್ಯಕ್ಷರು ಮುಂದಾಗಿದ್ದರು. ಪಕ್ಷಾತೀತವಾಗಿ ಹೆಚ್ಚಿನ ಸದಸ್ಯರು ಸಭೆಗೆ ಗೈರಾಗುವ ಮೂಲಕ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗುತ್ತಿದೆ.
ಕಳೆದ ಸಾಮಾನ್ಯ ಸಭೆಯಲ್ಲಿ ಕೈಗೊಳ್ಳಲಾದ ಹಲವು ಪ್ರಸ್ತಾವನೆಗಳನ್ನು ನಗರಸಭೆ ಮುಖ್ಯ ಲೆಕ್ಕಾಧಿಕಾರಿ ಅನುದಾನ ಕೊರತೆಯಿಂದ ಪ್ರಸ್ತಾವನೆಗಳನ್ನು ಅನುಷ್ಠಾನಗೊಳಿಸಲು ಸಾಧ್ಯವಿಲ್ಲ ಎನ್ನುವ ಪತ್ರವನ್ನು ಪೌರಾಯುಕ್ತರಿಗೆ ಬರೆದಿದ್ದರು. ಪುನಃ ಅನುದಾನ ಲಭ್ಯತೆಯಿಲ್ಲದೆ ಹಲವು ಪ್ರಸ್ತಾವನೆಗಳನ್ನು ಪ್ರಸಕ್ತ ಸಭೆಯಲ್ಲಿ ಮಂಡಿಸಲು ಅಧ್ಯಕ್ಷರು ಮುಂದಾಗಿದ್ದಾರೆ ಎನ್ನುವುದು ಸದಸ್ಯರ ಆರೋಪವಾಗಿದೆ.
ಸಭೆ ನಡೆಸಲು ಕನಿಷ್ಠ 12 ಜನ ಸದಸ್ಯರು ಹಾಜರಿರಬೇಕು. ಆದರೆ, ಅಧ್ಯಕ್ಷ ಸೇರಿ ಕೇವಲ 9 ಜನ ಮಾತ್ರ ಸಭೆಗೆ ಹಾಜರಾಗಿದ್ದರು. ಕಾಂಗ್ರೆಸ್, ಬಿಜೆಪಿ ಸೇರಿ ಪಕ್ಷೇತರ ಸದಸ್ಯರು ಸಭೆಗೆ ಗೈರಾಗಿದ್ದರಿಂದ ಸಭೆಯನ್ನು ಮುಂದೂಡಲಾಯಿತು.
ಸಭೆಯಲ್ಲಿ ಅಧ್ಯಕ್ಷ ಇ.ವಿನಯಕುಮಾರ, ಸದಸ್ಯರಾದ ಬಸವರಾಜ ಪಾಟೀಲ್ ದರೂರು, ಹೇಮಲತಾ, ಬಿ.ರಮೇಶ, ಯು.ಸರೋಜಮ್ಮ, ಪೌರಾಯುಕ್ತ ಮುನಿಸ್ವಾಮಿ ಇದ್ದರು.
ರಾಯಚೂರು: ಸಾಮಾನ್ಯ ಸಭೆಯ ವಿಷಯ ಹಾಗೂ ಪ್ರಸ್ತಾವನೆಗಳ ಬಗ್ಗೆ ಸದಸ್ಯರಿಗೆ ಕರೆ ಮಾಡಿ ತಿಳಿಸಿದ್ದೆ. ಅವರ ಬೇಡಿಕೆಗಳಿದ್ದರೆ, ಅಸಮಾಧಾನವಿದ್ದರೆ ಧೈರ್ಯವಾಗಿ ಸಭೆಗೆ ಬಂದು ಚರ್ಚಿಸಬೇಕಿತ್ತು. ಗೈರು ಹಾಜರಾಗುವುದು ಸಮಸ್ಯೆಗೆ ಪರಿಹಾರವಲ್ಲ ಎಂದು ನಗರಸಭೆ ಅಧ್ಯಕ್ಷ ಇ.ವಿನಯಕುಮಾರ ತಿಳಿಸಿದ್ದಾರೆ.
ಬಿಜೆಪಿ ಸದಸ್ಯರು ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆಯಲ್ಲಿನ ಭಿನ್ನಮತ ಉಂಟಾಗಿ ಸಭೆಗೆ ಬಂದಿಲ್ಲ. ಕಾಂಗ್ರೆಸ್ ಸದಸ್ಯರು ಪಕ್ಷದ ಕಾರ್ಯಕ್ರಮದ ಸಿದ್ಧತೆ ಹಿನ್ನೆಲೆಯಲ್ಲಿ ಸಭೆಗೆ ಆಗಮಿಸಿಲ್ಲ ಎಂದು ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.
ಮಾಜಿ ಸಂಸದ ಬಿ.ವಿ.ನಾಯಕ, ಶಾಸಕ ಡಾ.ಶಿವರಾಜ ಪಾಟೀಲ್ ಸೂಚನೆಯಂತೆ ಸ್ಥಾಯಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಗಿದೆ. ಅದಕ್ಕೆ ಎಲ್ಲರೂ ಅನುಮೋದನೆ ನೀಡಿದ್ದಾರೆ. ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಕವಿತಾ ತಿಮ್ಮಾರೆಡ್ಡಿ ಮತ್ತು ಗಾಯಿತ್ರಿ ನಾಡಗೌಡ ಮಧ್ಯೆ ಪೈಪೋಟಿಯಿಂದಾಗಿ ಸದಸ್ಯರ ನಡುವೆ ಎರಡು ಗುಂಪುಗಳಾಗಿವೆ. ನಗರಸಭೆಗೆ ಆಡಳಿತಾಧಿಕಾರಿ ನೇಮಕವಾಗಿದ್ದಾಗ 82 ಪ್ರಸ್ತಾವನೆಗಳನ್ನು ಮಂಜೂರಾತಿ ನೀಡಲಾಗಿದೆ. ಅವುಗಳನ್ನು ಸಾಮಾನ್ಯ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆಯಲೇ ಬೇಕಿದೆ. ಹಿಂದಿನ ಪೌರಾಯುಕ್ತರು 30 ಲಕ್ಷ ರೂ. ಬ್ಲೀಚಿಂಗ್ ಪೌಡರ್ ಖರೀದಿ ಮಾಡಿದ್ದಾರೆ. ತುರ್ತು ಸಂದರ್ಭದಲ್ಲಿ ಕೆಲವು ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಸದಸ್ಯರು ನೀಡಿದ ಪ್ರಸ್ತಾವನೆಗಳನ್ನು ಸಭೆಯಲ್ಲಿ ಮಂಡಿಸಲಾಗುತ್ತದೆ. ಸಭೆಯ ನಿರ್ಣಯವೇ ಅಂತಿಮವಾಗಿದೆ. ಕಸ ವಿಲೇವಾರಿಗೆ ಸೌಲಭ್ಯಗಳ ಕೊರತೆಯಿದೆ. 100 ತಳ್ಳುಬಂಡಿ, 10 ಟ್ರಾಕ್ಟರ್ ಕೊರತೆಯಿದ್ದು, ಖರೀದಿಗೆ ಸಭೆಯಲ್ಲಿ ಮಂಡಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಏನೇ ಭಿನ್ನಾಭಿಪ್ರಾಯಗಳಿದ್ದರೂ ಅಧ್ಯಕ್ಷ ಸ್ಥಾನಕ್ಕೆ ಸದಸ್ಯರು ಗೌರವ ಕೊಡಬೇಕು ಎಂದರು.