ನಗರಸಭೆಯಲ್ಲಿ ಅರಳಿದ ಕಮಲ; ಲಲಿತಾ ಕಡಗೋಲ ಅಧ್ಯಕ್ಷೆ ಸಾಜೀದ್ ಸಮೀರ್‌ಗೆ ಸೋಲು ಫಲಿತಾಂಶದ ಅಧಿಕೃತ ಘೋಷಣೆ ಬಾಕಿ

30032022 raichur cmc bjp president lalita
Published on


ರಾಯಚೂರು: ಸ್ಥಳೀಯ ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಪಡೆಯುವಲ್ಲಿ ಯಶಸ್ವಿಯಾಗಿದೆ. ಲಲಿತಾ ಕಡಗೋಲು ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ. ಹೆಚ್ಚಿನ ಸದಸ್ಯರ ಬಲ ಹೊಂದಿದ್ದರೂ ಅಧಿಕಾರ ಹಿಡಿಯುವಲ್ಲಿ ವಿಫಲವಾಗುವ ಮೂಲಕ ಕಾಂಗ್ರೆಸ್ ತೀವ್ರ ಮುಖಭಂಗ ಅನುಭವಿಸಿದೆ. ಆದರೆ, ಚುನಾವಣೆಯ ಅಧಿಕೃತ ಫಲಿತಾಂಶ ಘೋಷಣೆ ಬಾಕಿ ಇದೆ.

ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಲಲಿತಾ ಕಡಗೋಲ, ಕಾಂಗ್ರೆಸ್‌ನಿಂದ ಸಾಜೀದ್ ಸಮೀರ್ ನಾಮಪತ್ರ ಸಲ್ಲಿಸಿದ್ದರು. ನಗರಸಭೆ 35 ಸದಸ್ಯ ಬಲ ಹೊಂದಿದ್ದು, ಚುನಾವಣೆ ಪ್ರಕ್ರಿಯೆಯ 32 ಸದಸ್ಯರು ಹಾಗೂ ಸಂಸದ ರಾಜಾ ಅಮರೇಶ್ವರ ನಾಯಕ, ಶಾಸಕ ಡಾ.ಶಿವರಾಜ ಪಾಟೀಲ್, ಎಂಎಲ್ಸಿ ಶರಣಗೌಡ ಬಯ್ಯಪುರ ಪಾಲ್ಗೊಂಡಿದ್ದರು. ಕಾಂಗ್ರೆಸ್ ಸದಸ್ಯರಾದ ಇ.ವಿನಯಕುಮಾರ, ಶೈನಾಜ್ ಬೇಗಂ ಹಾಗೂ ಜೆಡಿಎಸ್ ಸದಸ್ಯೆ ನಿಖತ್ ಸಲ್ಮಾ ಗೈರಾಗಿದ್ದರು. ಬಿಜೆಪಿ ಅಭ್ಯರ್ಥಿ ಲಲಿತಾ ಕಡಗೋಲ ಪರ 19 ಸದಸ್ಯರು ಕೈಎತ್ತುವ ಮೂಲಕ ಬೆಂಬಲ ಸೂಚಿಸಿದರೆ, ಕಾಂಗ್ರೆಸ್ ಅಭ್ಯರ್ಥಿ ಸಾಜೀದ್ ಸಮೀರ್‌ರನ್ನು 15 ಸದಸ್ಯರು ಬೆಂಬಲಿಸಿದರು.

ಸುಳ್ಳು ಜಾತಿ ಪ್ರಮಾಣಪತ್ರ ಕುರಿತ ಪ್ರಕರಣ ಹೈಕೋಟ್‌ನಲ್ಲಿ ನಡೆಯುತ್ತಿರುವ ಕಾರಣ ಪಕ್ಷೇತರ ಸದಸ್ಯೆ ರೇಣಮ್ಮರ ಮತವನ್ನು ಮುಚ್ಚಿದ ಲಕೋಟೆಯಲ್ಲಿಟ್ಟು ಹೈಕೋರ್ಟ್‌ಗೆ ಸಲ್ಲಿಸಬೇಕಾಗಿದೆ. ಇದರಿಂದಾಗಿ ಚುನಾವಣಾಧಿಕಾರಿಯಾಗಿರುವ ಸಹಾಯಕ ಆಯುಕ್ತ ರಜನಿಕಾಂತ್ ಚವ್ಹಾಣ್ ಫಲಿತಾಂಶ ಘೋಷಣೆ ಮಾಡಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net