

ರಾಯಚೂರು: ಶಿಕ್ಷಣ ಸಂಸ್ಥೆಗಳನ್ನು ಉತ್ತಮ ಉದ್ದೇಶದೊಂದಿಗೆ ಬೆಳೆಸಿ ಸರಿಯಾದ ರೂಪುರೇಷೆಗಳನ್ನು ಕೊಟ್ಟು, ಗುರಿಯನ್ನು ರೂಪಿಸಿಕೊಂಡಾಗ ಶಿಕ್ಷಣ ಸಂಸ್ಥೆಗಳಿಂದ ಸಮಾಜವನ್ನು ಸುಧಾರಿಸಲು ಸಾಧ್ಯವಾಗುತ್ತದೆ ಎಂದು ರಾಯಚೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಹರೀಶ ರಾಮಸ್ವಾಮಿ ಹೇಳಿದರು.
ನಗರದ ರಾಯಚೂರು ವಿಶ್ವವಿದ್ಯಾಲಯದಲ್ಲಿ ಸಮಾಜ ವಿಜ್ಞಾನ ಹಾಗೂ ಕಲಾ ವಿಭಾಗಗಳ ವತಿಯಿಂದ ಹಮ್ಮಿಕೊಂಡಿದ್ದ ಭಾರತದಲ್ಲಿ ಸಾಮಾಜಿಕ ಚಳುವಳಿಗಳು ಶೀರ್ಷಿಕೆ ಅಡಿಯಲ್ಲಿ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮವನ್ನುದ್ದೇಶಿಸಿ ಮಂಗಳವಾರ ಮಾತನಾಡಿದರು.
ಸಮಾಜವನ್ನು ಕಟ್ಟುವ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ಸಮುದಾಯದ ಕಡೆಗೆ ಕೊಂಡೊಯ್ಯಬೇಕಾಗಿದೆ. ಸಮುದಾಯದ ಆಲೋಚನೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಬೇಕು. ಚಳುವಳಿಗಳ ಮುಖ್ಯ ಉದ್ದೇಶಗಳನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕಾಗಿದೆ. ಚಳುವಳಿಗಳಿಂದ ಮಾತ್ರ ಪ್ರಜಾಪ್ರಭುತ್ವವನ್ನು ಬಲಿಷ್ಠಗೊಳಿಸಲು ಸಾಧ್ಯ ಎಂದರು.
ಇದೇ ವೇಳೆ ರಾಯಚೂರು ವಿಶ್ವವಿದ್ಯಾಲಯದ ಕುಲಸಚಿವ ಡಾ.ವಿ.ಶಂಕರ್ ಮಾತನಾಡಿ, ಚಳುವಳಿ ಎಂದರೆ ಸಮಾಜದಲ್ಲಿರುವ ತೊಡಕುಗಳನ್ನು ಸುಧಾರಿಸಿ ಉತ್ತಮ ಬದಲಾವಣೆಯನ್ನು ತರುವ ಚಟುವಟಿಕೆಯಾಗಿದೆ. ಸಮಾಜದಲ್ಲಿರುವ ಅನಿಷ್ಠ ಪದ್ದತಿಗಳನ್ನು ಅನೇಕ ಚಳುವಳಿಗಳ ಮೂಲಕ ಹೋಗಲಾಡಿಸಲಾಗಿದೆ. ಮುಂದಿನ ದಿನಗಳಲ್ಲಿ ಬುದ್ಧಿ ಜೀವಿಗಳು, ಸಂಘ, ಸಂಸ್ಥೆಗಳು ಜಾತಿ, ಪಕ್ಷಬೇದ ಮರೆತು ಒಟ್ಟಾಗಿ ಸಮಾಜದಲ್ಲಿರುವ ಕೆಟ್ಟ ಆಚರಣೆಗಳು, ವಿಚಾರಗಳನ್ನು ಹೋಗಲಾಡಿಸಲು ಹೋರಾಟಗಳನ್ನು ಕೈಗೊಂಡರೇ ಚಳುವಳಿಗಳ ಧ್ಯೇಯೋದ್ದೇಶಗಳು ಪೂರ್ಣಗೊಳ್ಳುತ್ತವೆ ಎಂದು ತಿಳಿಸಿದರು.
ಹೈದ್ರಾಬಾದ್‌ನ ಉಸ್ಮಾನಿಯ ವಿಶ್ವವಿದ್ಯಾಲಯ ಮಾಜಿ ಡೀನ್ ಪ್ರೊ.ಹರಗೋಪಾಲ ಅವರು ವರ್ಚ್ಯುವಲ್ ಮೂಲಕ ಮಾತನಾಡಿ, ರಾಜಕೀಯ ಚಳುವಳಿಗಳು ಸಾಮಾಜಿಕ ಚಳುವಳಿಯಾಗಿ ಬದಲಾಗುವ ಮೂಲಕ ಸಮಾಜದ ಉತ್ತಮ ಬೆಳವಣಿಗೆಗೆ ಸಾಕ್ಷಿಯಾಗಬೇಕಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿವಿಯ ಮೌಲ್ಯಮಾಪನ ಕುಲಸಚಿವ ಪ್ರೊ.ಯರ‌್ರಿಸ್ವಾಮಿ, ವಿಚಾರ ಸಂಕಿರಣದ ಸಂಚಾಲಕ ಹಾಗೂ ರಾಜ್ಯಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ.ಕೆ.ವೆಂಕಟೇಶ, ಚಾಮರಾಜನಗರದ ಕೆಆರ್‌ಆರ್‌ಎಸ್‌ನ ಸದಸ್ಯೆ ಚುಕ್ಕಿ ನಂಜುಂಡಸ್ವಾಮಿ, ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕ ಡಾ.ರಾಘವೇಂದ್ರ ಫತ್ತೇಪುರ ಸೇರಿದಂತೆ ಇತರರಿದ್ದರು.